ಮಕ್ಕಳ ದಿನಾಚರಣೆ ಪ್ರಯುಕ್ತ ಉಲ್ಲಾಸ್ ಸ್ಕೂಲ್ ಸಿನಿಮಾಸ್ ವತಿಯಿಂದ ‘ಮಕ್ಕಳ ಚಿತ್ರೋತ್ಸವ’ ಲೋಗೋ ಲಾಂಚ್ ಮಾಡಲಾಯಿತು. ಜನವರಿ 26ರಿಂದ ಮೂರು ದಿನ ನಡೆಯುವ ಮಕ್ಕಳ ಚಲನ ಚಿತ್ರೋತ್ಸವವನ್ನು ಇದೇ ಮೊದಲ ಬಾರಿಗೆ ಉಲ್ಲಾಸ್ ಸ್ಕೂಲ್ ಸಿನಿಮಾಸ್ ಆಯೋಜನೆ ಮಾಡಿದೆ. ಅದರ ಪೂರ್ವಭಾವಿಯಾಗಿ ಇಂದು ಚಂದನವನದ ಬಾಲನಟರನ್ನೆಲ್ಲ ಒಟ್ಟು ಗೂಡಿಸಿ ಮಕ್ಕಳ ಚಲನಚಿತ್ರೋತ್ಸವ ಲೋಗೋ ಲಾಂಚ್ ಮಾಡಿಸಲಾಯಿತು.
ಜನವರಿ 26ರಿಂದ ಮೂರು ದಿನಗಳ ಕಾಲ ‘ಮಕ್ಕಳ ಚಲನಚಿತ್ರೋತ್ಸವ’ ನಡೆಯಲಿದ್ದು, ಈ ಬಾರಿ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಕೇವಲ ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಬಾಲ ನಟರಾಗಿ ಪ್ರಖ್ಯಾತಿ ಗಳಿಸಿದ್ದ ಕಲಾವಿದರನ್ನು ಒಂದೆಡೆ ಸೇರಿಸಿದ್ದು ವಿಶೇಷವಾಗಿತ್ತು. ಮಾಸ್ಟರ್ ಮಂಜುನಾಥ್, ಮಾಸ್ಟರ್ ರೋಹಿತ್, ಸುನಿಲ್ ರಾವ್, ವಿಜಯ ರಾಘವೇಂದ್ರ, ಮಾಸ್ಟರ್ ಆನಂದ್, ಅಭಿಷೇಕ್, ವಿನಾಯಕ ಜೋಶಿ, ಹೇಮಾ ಪಂಚಮುಖಿ, ಎಸ್.ಎಸ್. ಕೀರ್ತನ, ನಟರಾಜ್ ಗುಬ್ಬಿ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮಕ್ಕಳ ಚಿತ್ರಕ್ಕೆ ಆದ್ಯತೆ ಕಡಿಮೆಯಾಗುತ್ತಿದೆ. ಎಲ್ಲಾ ಫಿಲಂ ಪೆಸ್ಟಿವಲ್ ಗಳಿಗೆ ಹತ್ತು ಹದಿನೈದು ಸಿನಿಮಾಗಳನ್ನು ಕಳುಹಿಸಿದ್ರು ಒಂದೂ ಸಿನಿಮಾ ಕೂಡ ಸೆಲೆಕ್ಟ್ ಆಗೋದಿಲ್ಲ. ಮಕ್ಕಳ ಚಿತ್ರಕ್ಕೆ ಆದ್ಯತೆ ನೀಡೋ ದೃಷ್ಟಿಕೋನದಿಂದ ಉಲ್ಲಾಸ್ ಸ್ಕೂಲ್ ಸಿನಿಮಾಸ್ ವತಿಯಿಂದ ಇದೇ ಮೊದಲ ಬಾರಿಗೆ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಈ ಬಾರಿ ಅಪ್ಪು ಅವರ ಸ್ಮರಣಾರ್ಥ ಕೇವಲ ಕನ್ನಡ ಸಿನಿಮಾಗಳನ್ನು ಮಾತ್ರ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಲಾಗುವುದು ಎಂದು ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಮಾಲೀಕರಾದ ಉಲ್ಲಾಸ್ ಮಾಹಿತಿ ಹಂಚಿಕೊಂಡಿದ್ದಾರೆ.
ಲೋಗೋ ಲಾಂಚ್ ಮಾಡಿ ಮಾತನಾಡಿದ ನಟ ವಿಜಯ ರಾಘವೇಂದ್ರ ನಾವು ತುಂಬಾ ಅದೃಷ್ಟವಂತ ತಲೆಮಾರು ಅಂತ ಹೇಳೋಕೆ ಇಷ್ಟಪಡ್ತಿನಿ. ಮುಂಬರುವ ಜನರೇಷನ್ ಗೆ ಈ ರೀತಿ ಸಪೋರ್ಟ್ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಇವತ್ತು ಎಲ್ಲಾ ಬಾಲನಟರೂ ಒಂದೇ ವೇದಿಕೆಯಲ್ಲಿ ಮತ್ತೆ ಸೇರುವಂತಾಯ್ತು ಇದನ್ನು ಸಾಧ್ಯವಾಗಿಸಿದಕ್ಕೆ ಎಲ್ಲರಿಗೂ ಆಭಾರಿ. ಬಾಲನಟರಾಗಿದ್ದಾಗ ನಿರ್ದೇಶಕರಿಂದ, ಹಿರಿಯ ಕಲಾವಿದರಿಂದ ಸಿಕ್ಕ ಸಪೋರ್ಟ್, ತರಭೇತಿ ಎಲ್ಲವೂ ನಮ್ಮನ್ನು ಇಲ್ಲಿವರೆಗೆ ಕರೆತಂದು ನಿಲ್ಲಿಸಿವೆ. ಮಕ್ಕಳ ಚಿತ್ರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆರಂಭವಾಗಿರುವ ಮಕ್ಕಳ ಚಲನಚಿತ್ರೋತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ರು.
ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಮಾಜಿ ಅಧ್ಯಕ್ಷರಾದ ಚಿನ್ನೇಗೌಡ್ರು, ಸುಂದರ್ ರಾಜ್, ಎಮ್ ಏನ್ ಕುಮಾರ್, ಟಿ ಪಿ ಸಿದ್ದರಾಜು ಸೇರಿದಂತೆ ಹಲವರು ಭಾಗಿಯಾಗಿದ್ದರು.