ಇಲ್ಲಿಯವರೆಗೂ ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿದ್ದ ರಘು ಕೋವಿ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಇವರ ಮೊದಲ ನಿರ್ದೇಶನದ ಚಿತ್ರಕ್ಕೆ ಕೇರಳ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ ಬರುತ್ತಿರುವುದು ಖಚಿತವಾಗಿದೆ. ಈಗಾಗಲೇ ಕೇರಳಕ್ಕೆ ತೆರಳಿ ಪ್ರಿಯಾ ವಾರಿಯರ್ಗೆ ಕತೆ ಹೇಳಿ ಬಂದಿರುವ ರಘು ಕೋವಿ, ಕಣ್ಸನ್ನೆ ಹುಡುಗಿಯನ್ನು ಕನ್ನಡಕ್ಕೆ ತರುವಲ್ಲಿ ಸಫಲರಾಗಿದ್ದಾರೆ. ಈ ಚಿತ್ರಕ್ಕೆ ಕುಮಾರ್ ಬಂಗಾರಪ್ಪ ಪುತ್ರ ಅಥವಾ ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಮಗ ವಿಕ್ಕಿ ನಾಯಕರಾಗುವ ಸಾಧ್ಯತೆಗಳಿವೆ.
ಆದರೆ, ನಿರ್ದೇಶಕರು ಮಾತ್ರ ಇನ್ನೂ ಯಾರನ್ನೂ ಪಕ್ಕಾ ಮಾಡಿಕೊಂಡಿಲ್ಲ. ಒಂದು ವೇಳೆ ಅಂದುಕೊಂಡಂತೆ ಆದರೆ ಕುಮಾರ್ ಬಂಗಾರಪ್ಪ ಪುತ್ರ ರಘು ಕೋವಿ ಚಿತ್ರದ ಮೂಲಕ ಕನ್ನಡಕ್ಕೆ ಚಿತ್ರರಂಗಕ್ಕೆ ಬರಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಬಿ ಎಸ್ ಸುಧೀಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ನೈಜ ಕತೆಯ ಆಧಾರಿತ ಪ್ರೇಮ ಸಿನಿಮಾ. ಕನ್ನಡದಲ್ಲಿ ಇದುವರೆಗೂ ಇಂಥ ಪ್ರೇಮ ಕತೆ ಬಂದಿಲ್ಲ. ಈ ಕಾರಣಕ್ಕೆ ಹೆಸರಿನಿಂದ ಹಿಡಿದು ಎಲ್ಲವನ್ನೂ ಭಿನ್ನವಾಗಿಯೇ ಇಡುವುದಕ್ಕೆ ಹೊರಟಿದ್ದಾರೆ ನಿರ್ದೇಶಕರು.