Kannada Beatz
News

20ವರುಷಗಳ ಗೋಲ್ಡನ್ ಸ್ಟಾರ್ ಸಂಭ್ರಮದಲ್ಲಿ ಆರಂಭವಾಯಿತು ಗಣೇಶ್ ನೂತನ ಸಿನಿಮಾ “ತಮ್ಮ ಸುಖಗಮನ ಬಯಸುವ “

ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಸೆಳೆದಿರುವ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ಹಾಗೂ “ಹೊಂದಿಸಿ ಬರೆಯಿರಿ”, “ತೀರ್ಥರೂಪ ತಂದೆಯವರಿಗೆ” ಅಂತಹ ಉತ್ತಮ ಚಿತ್ರಗಳ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ನೂತನ ಚಿತ್ರ “ತಮ್ಮ ಸುಖಾಗಮನ ಬಯಸುವ”. ವೈಷ್ಣವಿ ಫಿಲಂಸ್ ಮೂಲಕ ವಿಜಯ್ ಲೋಹಿತ್ ಅವರು ನಿರ್ಮಿಸುತ್ತಿರುವ, ಸತೀಶ್ ಎಚ್ ಗೌಡ ಅವರ ಸಹ ನಿರ್ಮಾಣವಿರುವ ಹಾಗೂ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿರುವ “ತಮ್ಮ ಸುಖಾಗಮನ ಬಯಸುವ” ಚಿತ್ರದ ಮುಹೂರ್ತ ಸಮಾರಂಭ ಮಾಹಾ ಶಿವರಾತ್ರಿಯ ಶುಭದಿನದಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಿಲ್ಪ ಗಣೇಶ್ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಣೇಶ್ ಅವರ ಸಾಕಷ್ಟು ಅಭಿಮಾನಿಗಳು ಹಾಗೂ ಸ್ನೇಹಿತರು ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇಂದು ನನ್ನ “ಗೋಲ್ಡನ್” ದಿನ ಎಂದು ಮಾತನಾಡಿದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ, 2006 ರಲ್ಲಿ “ಮುಂಗಾರು ಮಳೆ” ತೆರೆ ಕಂಡಾಗ ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ಆ ಸಿನಿಮಾವನ್ನು ಎಷ್ಟು ಬಾರಿ ನೋಡಿದ್ದೇನೊ ಲೆಕ್ಕ ಇಲ್ಲ. ಇಂದು ಅವರ ಜೊತೆಗೆ ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯಾಗಿದೆ. ಇದು ಗಣೇಶ್ ಅವರ ಇಪ್ಪತ್ತು ವರ್ಷಗಳ ಜರ್ನಿಯನ್ನು ಸಂಭ್ರಮಿಸುವ ಸಮಯ. “ತೀರ್ಥರೂಪ ತಂದೆಯವರಿಗೆ” ಚಿತ್ರದ ಚಿತ್ರೀಕರಣ ಸಮಯದಲ್ಲಿ ನನ್ನ ಸ್ನೇಹಿತನ ಮೂಲಕ ಗಣೇಶ್ ಅವರನ್ನು ಸಂಪರ್ಕ ಮಾಡಿ ಈ ಚಿತ್ರದ ಕಥೆ ಹೇಳಿದೆ. ಇದು ಗಣೇಶ್ ಅವರಿಗಾಗಿಯೇ ಬರೆದಿರುವ ಕಥೆ. ಈ ಕಥೆಗೆ ಅವರೆ ಸೂಕ್ತ ನಾಯಕ. ಇದೊಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಹಾಗೂ ಎಮೋಷನಲ್ ಡ್ರಾಮ. ವೈಷ್ಣವಿ ಫಿಲಂಸ್ ಲಾಂಛನದಲ್ಲಿ ವಿಜಯ್ ಲೋಹಿತ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸತೀಶ್ ಎಚ್ ಗೌಡ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಉಳಿದ ತಾರಾಬಳಗ ಹಾಗೂ ತಂತ್ರಜ್ಞರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ. ಇನ್ನೂ, ಶೀರ್ಷಿಕೆಯ ಬಗ್ಗೆ ಹೇಳುವುದಾದರೆ, ಶೀರ್ಷಿಕೆ ಬಳಕೆಗೆ ಹತ್ತಿರವಾಗಿರಬೇಕು. ಜನರಿಗೆ ಆಪ್ತವಾಗಬೇಕು. ನನ್ನ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಹಾಗೆ ಇತ್ತು. ಈ ಶೀರ್ಷಿಕೆ ಕೂಡ ಜನರಿಗೆ ಆಪ್ತವಾಗುತ್ತದೆ ಜೊತೆಗೆ ಕಥೆಗು ಹಾಗೂ ಪಾತ್ರಗಳಿಗೂ ಪೂರಕವಾಗಿದೆ ಎಂದರು.

“ಮುಂಗಾರು ಮಳೆ” 2006 ರಲ್ಲಿ ಬಿಡುಗಡೆಯಾಗಿದ್ದು, ಈಗ 2026. ಇಪ್ಪತ್ತು ವರ್ಷಗಳಾಗಿದೆ. ಇಪ್ಪತ್ತು ವರ್ಷಗಳು ಹೇಗೆ ಕಳೆಯಿತು ಗೊತ್ತಾಗಲಿಲ್ಲ. ದೇವರು ನನಗೆ ಒಳ್ಳೆಯ ನಿರ್ಮಾಪಕರು, ನಿರ್ದೇಶಕರು, ಬರಹಗಾರರು ಹಾಗೂ ನಿಮ್ಮೆಲ್ಲರ ಪ್ರೀತಿ ಕೊಟ್ಟಿದ್ದಾನೆ. ಇದು ಹೀಗೆ ಮುಂದುವರೆಯಲಿ. ಇನ್ನೂ, ಒಂದು ದಿನ ಸ್ನೇಹಿತರೊಬ್ಬರು ಫೋನ್ ಮಾಡಿ ನನ್ನ ಸ್ನೇಹಿತ ಒಂದು ಸ್ಕ್ರಿಪ್ಟ್ ಮಾಡಿಕೊಂಡಿದ್ದಾನೆ. ಅದು ನಿಮಗಾಗಿಯೇ ಮಾಡಿರುವ ಕಥೆಯಂತೆ ಎಂದರು. ನಾನು ಯಾರು ಅಂತ ಕೇಳಿದೆ. ರಾಮೇನಹಳ್ಳಿ ಜಗನ್ನಾಥ. “ಹೊಂದಿಸಿ ಬರೆಯಿರಿ” ನಿರ್ದೇಶಕರು ಎಂದರು. ಹೌದಾ. ನಾನು ಆ ಸಿನಿಮಾ ನೋಡಿದ್ದೇನೆ. ಬಹಳ ಚೆನ್ನಾಗಿದೆ. ಅವರೊಬ್ಬ ಸೆನ್ಸಿಬಲ್ ರೈಟರ್. ಮನುಷ್ಯನ ಭಾವನೆಗಳನ್ನು ಆ ಚಿತ್ರದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ ಅಂದೆ. ಆನಂತರ ಜಗನ್ನಾಥ ಅವರು ಬಂದು ಕಥೆ ಹೇಳಿದರು. ಕಥೆ ಕೇಳುವಾಗಲೇ ಸಂತೋಷದಲ್ಲಿ ಅಳು ಬಂತು. ಅಂತಹ ಅಪರೂಪದ ಕಥೆ ಇದು. ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾದರೂ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನಿರ್ದೇಶಕರ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಬಹಳ ಚೆನ್ನಾಗಿತ್ತು. ನಮ್ಮ ಚಿತ್ರಕ್ಕೂ ಇಂತಹ ಶೇರ್ಷಿಕೆಯನ್ನೇ ಆಯ್ಕೆ ಮಾಡಿ ಎಂದು ಹೇಳಿದ್ದೆ. “ತಮ್ಮ ಸುಖಾಗಮನ ಬಯಸುವ” ಎಂದು ಎಲ್ಲರಿಗೂ ಪ್ರಿಯವಾಗುವ ಶೀರ್ಷಿಕೆ ಇಟ್ಟಿದ್ದಾರೆ. ಚಿತ್ರವನ್ನು ಸಹ ಚೆನ್ನಾಗಿ ಮಾಡುತ್ತಾರೆ ಎಂಬ ಭರವಸೆ ಇದೆ. ಅದಕ್ಕೆ ನಿರ್ಮಾಪಕರು ಸಹಕಾರ ನೀಡುತ್ತಾರೆ. ಇನ್ನೂ, ಅರ್ಜುನ್ ಜನ್ಯ ಹಾಗೂ ನನ್ನ ಕಾಂಬಿನೇಶನ್ ನಲ್ಲಿ ಸಾಕಷ್ಟು ಜನಪ್ರಿಯ ಹಾಡುಗಳು ಬಂದಿದೆ. ಈ ಚಿತ್ರದಲ್ಲೂ ಸುಮಧುರ ಹಾಡುಗಳಿರಲ್ಲಿದೆ ಎಂದು ನಾಯಕ ಗಣೇಶ್ ತಿಳಿಸಿದರು.

ಇದು ನಮ್ಮ ಸಂಸ್ಥೆಯ ಎರಡನೇ ಚಿತ್ರ. ಮೊದಲ ಚಿತ್ರಕ್ಕೆ ತಾವು ನೀಡಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ ಎಂದರು ನಿರ್ಮಾಪಕ ವಿಜಯ್ ಲೋಹಿತ್. ಸಹ ನಿರ್ಮಾಪಕ ಸತೀಶ್ ಎಚ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Kannada Beatz

ಸಿಂಪಲ್ ಸುನಿ ಸಾರಥ್ಯದ ‘ಮೋಡ ಕವಿದ ವಾತಾವರಣ’ ಸಿನಿಮಾದ ಮೊದಲ ಹಾಡು ರಿಲೀಸ್

Kannada Beatz

“ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕರಾಗಿ ನಟಿಸುತ್ತಿರುವ “ಉಗ್ರಾಯುಧಮ್” ಚಿತ್ರಕ್ಕೆ ಅದ್ದೂರಿ ಚಾಲನೆ. .

Kannada Beatz

Leave a Comment

Share via
Copy link