ಸೀತಾರಾಮ್ ಬಿನೊಯ್ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದೇವಿ ಪ್ರಸಾದ್ ಶೆಟ್ಟಿ ಹೊಸ ಸಿನಿಮಾ ಘೋಷಣೆಯಾಗಿದೆ. ವಿಜಯ್ ರಾಘವೇಂದ್ರ ನಟಿಸಿದ್ದ 50ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ದೇವಿ ಈಗ ಮತ್ತೊಮ್ಮೆ ಚಿನ್ನಾರಿ ಮುತ್ತನ ಜೊತೆ ಕೈ ಜೋಡಿಸಿದ್ದಾರೆ. ಇವತ್ತು ಬೆಂಗಳೂರಿನ ಧರ್ಮಗಿರಿ ಮಂಜುನಾಥ್ ಸ್ವಾಮಿ ದೇಗುಲದಲ್ಲಿ ಸಿನಿಮಾ ಮುಹೂರ್ತ ನೆರವೇರಿಸಿದ ಬಳಿಕ ಮಾಧ್ಯಮದವರೊಟ್ಟಿಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.
ವಿಜಯ ರಾಘವೇಂದ್ರ ಮಾತನಾಡಿ, ಸೀತಾರಾಮ್ ಬಿನೋಯ್ ಕೇಸ್ ನಂಬರ್ 18ರ ನಂತರ ಇವರು ನನಗೆ ಮತ್ತೊಮ್ಮೆ ಅವಕಾಶ ಕೊಟ್ಟಿರುವುದು. ಸಾಧಾರಣವಾಗಿ ಒಂದೊಳ್ಳೆ ತಂಡ ಸಿಗುವುದು ಅಪರೂಪ. ದೇವಿ ಡೆಡಿಕೇಷನ್, ಕೆಲಸದ ಬಗ್ಗೆ ಇರುವ ಸಿರಿಯಸ್ ನೆಸ್ ಬಹಳ ವಿರಳವಾಗಿ ಸಿಗುವ ಟೆಕ್ನಿಷಿಯನ್. ಪ್ರತಿಯೊಬ್ಬರೂ ಈ ಸಿನಿಮಾಗೆ ಪ್ರೋತ್ಸಾಹಿಸಿ ಎಂದರು.
ಹಿರಿಯ ಪತ್ರಕರ್ತರಾದ ಜೋಗಿ ಮಾತನಾಡಿ, 2015ಕ್ಕೆ ಸಿನಿಮಾ ಸ್ಕ್ರಿಪ್ಟ್ ಬರೆಯುವುದನ್ನು ನಿಲ್ಲಿಸಿಬಿಟ್ಟೆ. ಇದೊಳ್ಳೆ ರಾಮಾಯಣ ಸಿನಿಮಾ ನಂತರ ಯಾವುದೇ ಚಿತ್ರಕ್ಕೆ ಬೇರೆ ಬೇರೆ ಕಾರಣಗಳಿಂದ ಸ್ಕ್ರಿಪ್ಟ್ ಬರೆದಿರಲಿಲ್ಲ. ಈ ಟೀಂ ಬಂದು ಕಥೆ ಹೇಳಿದಾಗ ನಾನು ತುಂಬಾ ಎಕ್ಸೈಟ್ ಆದೆ. ಈ ಹುಡುಗರ ಹತ್ತಿರ ಬಹಳ ಕಲಿಯುವುದು ಇದೆ ಅನಿಸುತ್ತದೆ. ಸುಂದರವಾದ ತಂಡ, ಸುಂದರವಾದ ಕಥೆ. ಬಹಳ ಸುಂದರವಾಗಿ ಪ್ರೆಸೆಂಟ್ ಮಾಡಲು ಹೊರಟಿದ್ದಾರೆ. ನಿಜವಾಗಲೂ ಬಹಳ ಸಂತೋಷವಾಗುತ್ತಿದೆ. ಪ್ರತಿಯೊಬ್ಬರೂ ಬೆಂಬಲ ಕೊಡಿ ಎಂದರು.
ಕ್ರೈಮ್ ಸಿನಿಮಾಗಳ ಬಗ್ಗೆ ಹೆಚ್ಚು ಒಲವಿರುವ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಈ ಬಾರಿ ತನಿಖಾ ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. 09/2018 ಎಂಬ ಅಡಿಬರಹವಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಹಾಗೂ ಭಾವನಾ ಮೆನನ್ ಇಬ್ಬರು ಪೊಲೀಸ್ ಅಧಿಕಾರಿಗಳಾಗಿ ನಟಿಸಲಿದ್ದಾರೆ. ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ವೈದ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದ ತಾರಾಬಳಗದ ಮಾಹಿತಿಯನ್ನು ಚಿತ್ರತಂಡ ಶೀಘ್ರವಾಗಿ ನೀಡಲಿದೆ.
ಸಾತ್ವಿಕ್ ಹೆಬ್ಬಾರ್ ಮತ್ತು ದೇವಿಪ್ರಸಾದ್ ಶೆಟ್ಟಿ ಜೊತೆಗೆ ಅರವಿಂದ್ ಶೆಟ್ಟಿ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕೇಸ್ ಆಫ್ ಕೊಂಡಾಣಕ್ಕೆ ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಜೋಗಿಯವರ ಸಂಭಾಷಣೆ ಈ ಚಿತ್ರಕ್ಕಿದೆ. ಸೆಪ್ಟೆಂಬರ್ 28 ರಿಂದ ಶೂಟಿಂಗ್ ಆರಂಭವಾಗಲಿದೆ. ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.