ಟೀಸರ್ ಮೂಲಕ ಸದ್ದು ಮಾಡುತ್ತಿದೆ ತಾತ – ಮೊಮ್ಮಗನ ಬಾಂಧವ್ಯದ ಈ ಚಿತ್ರ.
ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆದ್ದಿರುವ ಅನಂತನಾಗ್ ಹಾಗೂ ದೂದ್ ಪೇಡ ಎಂದೇ ಖ್ಯಾತರಾಗಿರುವ ದಿಗಂತ್ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ “ತಿಮ್ಮಯ್ಯ & ತಿಮ್ಮಯ್ಯ” ಚಿತ್ರ ತೆರೆಗೆ ಬರಲು ಅಣಿಯಾಗಿದೆ.
ಇತ್ತೀಚಿಗೆ ಈ ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಅನಂತನಾಗ್ ಹಾಗೂ ದಿಗಂತ್, ತಾತ – ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಬಾಂಧವ್ಯದ ಸನ್ನಿವೇಶಗಳೇ ಚಿತ್ರದ ಹೈಲೆಟ್. ಮೂವತ್ತು ವರ್ಷಗಳ ನಂತರ ತಾತ ಹಾಗೂ ಮೊಮ್ಮಗ ಭೇಟಿಯಾದಾಗ ಯಾವ ರೀತಿ ಇರಬಹುದು? ಎಂಬುದನ್ನು ಟೀಸರ್ ಮೂಲಕ ನಿರ್ದೇಶಕ ಸಂಜಯ್ ಶರ್ಮ ಮನಮುಟ್ಟುವಂತೆ ತೋರಿಸಿದ್ದಾರೆ. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಪ್ರಶಂಸೆ ದೊರಕುತ್ತಿದೆ.
ಗರುಡ ಮೋಷನ್ ಪಿಕ್ಚರ್ಸ್ ಪ್ರೈ ಲಿ ಲಾಂಛನದಲ್ಲಿ ರಾಜೇಶ್ ಶರ್ಮ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮೂಲತಃ ಕನ್ನಡದವರೇ ಆಗಿರುವ ನಿರ್ದೇಶಕ ಸಂಜಯ್ ಶರ್ಮ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಬಾಲಿವುಡ್ ನ ಖ್ಯಾತ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಸಂಜಯ್ ಶರ್ಮ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
ಚಿತ್ರದಲ್ಲಿ ನಾಲ್ಕು ಸುಮಧುರ ಹಾಡುಗಳಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ ಹಾಡುಗಳನ್ನು ಬರೆದಿದ್ದಾರೆ. ಬಾಲಕೃಷ್ಣ ತೋಟ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ಕೊಡಗು ಹಾಗೂ ಕುಣಿಗಲ್ ನಲ್ಲಿ ಚಿತ್ರೀಕರಣ ನಡೆದಿದೆ.
ಅನಂತನಾಗ್, ದಿಗಂತ್, ಶುಭ್ರ ಅಯ್ಯಪ್ಪ, ರುಕ್ಮಿಣಿ ವಿಜಯಕುಮಾರ್, ವಿನೀತ್ ಬೀಪ್ ಕುಮಾರ್, ಪ್ರಕಾಶ್ ತುಮ್ಮಿನಾಡ್, ಕೆ.ಎಸ್.ಶ್ರೀಧರ್, ಮಿಮಿಕ್ರಿ ಗೋಪಿ, ಅಂಬುಜಾಕ್ಷಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.