ಡಾಲಿ ಧನಂಜಯ ಅಭಿನಯದ “ಬಡವ ರಾಸ್ಕಲ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರೀಕ್ಷೆಗೂ ಮೀರಿ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂತಸವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು.
ಇದೊಂದು ಮಧ್ಯಮವರ್ಗದ ಕಥೆ. ಆಗಷ್ಟೇ ವಿದ್ಯಾಭ್ಯಾಸ ಮುಗಿಸಿದ ಯುವಕ ಕೆಲಸಕ್ಕಾಗಿ ಹುಡುಕುವ ಸನ್ನಿವೇಶಗಳೇ ಮುಖ್ಯ ಕಥಾವಸ್ತು. ಅಪ್ಪ-ಅಮ್ಮನ ಜೊತೆ ಮಗನ ಬಾಂಧವ್ಯವನ್ನು ಮನತಟ್ಟುವಂತೆ ನಿರ್ದೇಶಕರು ತೋರಿಸಿದ್ದಾರೆ. ಕೆ.ಆರ್.ಜಿ ಸ್ಟುಡಿಯೋದವರು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಇದೇ 24ರಂದು ಚಿತ್ರ ತೆರೆಗೆ ಬರಲಿದೆ. ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ಡಾಲಿ ಧನಂಜಯ.
ನಾನು ಹಾಗೂ ಧನಂಜಯ ಬಹಳ ದಿನಗಳ ಸ್ನೇಹಿತರು. ಡಾಲಿಗಾಗಿ ಕಥೆ ಮಾಡಿಕೊಂಡಿದ್ದೆ. ಅದಕ್ಕೂ ಮೊದಲು ನಾನು ನಿರ್ದೇಶನ ಮಾಡಿದರೆ, ಮೊದಲು ಧನಂಜಯ್ ಅವರ ಸಿನಿಮಾ ಮಾಡುತ್ತೇನೆ ಅಂದುಕೊಂಡಿದೆ. ಕಥೆ ಸಿದ್ದಮಾಡಿ ಧನಂಜಯ ಬಳಿ ಹೇಳಿದೆ. ಅವರಿಗೆ ಇಷ್ಟವಾಯಿತು. ಈ ಚಿತ್ರದಲ್ಲಿ ನಟಿಸುವುದಷ್ಟೇ ಅಲ್ಲ. ನಿರ್ಮಾಣವನ್ನು ಮಾಡುತ್ತೇನೆ ಅಂದರು ಧನಂಜಯ. ನಂತರ ಒಳ್ಳೆಯ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಶಂಕರ್ ಗುರು.
ನಾನು ಎರಡು ವರ್ಷಗಳಿಂದ ಈ ಚಿತ್ರದ ಬರುವಿಕೆಗಾಗಿ ಕಾಯುತ್ತಿದ್ದೇನೆ. ನನಗೆ ಅಚ್ಚುಮೆಚ್ಚಿನ ಪಾತ್ರವಿದು. ಡಾಲಿ ಅವರೆ ನಿರ್ಮಾಣ ಮಾಡಿರುವುದು ಸಂತೋಷ ತಂದಿದೆ . ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು ನಾಯಕಿ ಅಮೃತ ಅಯ್ಯಂಗಾರ್.
ಹಿರಿಯನಟರಾದ ರಂಗಾಯಣ ರಘು ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿ, ತಂಡಕ್ಕೆ ಶುಭ ಕೋರಿದರು.
ನಾನು ನನ್ನ ಪಾತ್ರದ ಬಗ್ಗೆ ಹೇಳುವ ಹಾಗೆ ಇಲ್ಲ. ಚಿತ್ರದಲ್ಲೇ ನೋಡಿ. ಡಾಲಿ ಸೇರಿದಂತೆ ಎಲ್ಲರಿಗೂ ಒಳ್ಳೆಯದಾಗಲಿ ಎಂದರು ನಟಿ ಸ್ಪರ್ಶ ರೇಖ.
“ಬಡವ ರಾಸ್ಕಲ್” ಕೆ ಆರ್ ಜಿ ಸ್ಟುಡಿಯೋ ಮೂಲಕ ಬಿಡುಗಡೆಯಾಗುತ್ತಿರುವ 50ನೇ ಚಿತ್ರ. “ರತ್ನನ ಪ್ರಪಂಚ” ಚಿತ್ರದ ಹಾಗೆ ಈ ಚಿತ್ರ ಕೂಡ ಯಶಸ್ವಿಯಾಗುತ್ತದೆ ಅಂದರು ಕಾರ್ತಿಕ್ ಗೌಡ.
ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟ ನಾಗಭೂಷಣ್, ಸಾಹಸ
ವಿನೋದ್ ಹಾಗೂ ನೃತ್ಯ ನಿರ್ದೇಶಕ ರಾಜು “ಬಡವ ರಾಸ್ಕಲ್” ಚಿತ್ರದ ಬಗ್ಗೆ ಮಾತನಾಡಿದರು.