ಅದಿತಿ ಪ್ರಭುದೇವ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಹಾಗೂ ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್ ನ “ಆನ” ಚಿತ್ರ ಇದೇ ಡಿಸೆಂಬರ್ 17 ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದವಾರ ಬಿಡುಗಡೆಯಾಗಿರುವ ಟ್ರೇಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಹದಿನೇಳರಂದು ಚಿತ್ರ ತೆರೆಗೆ ಬರಲಿದೆ. ಇದೇ ಮೊದಲ ಬಾರಿಗೆ ಅದಿತಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುನೀಲ್ ಪುರಾಣಿಕ್ ಅವರ ಪಾತ್ರ ಸಹ ಎಲ್ಲರ ನೆನಪಿನಲ್ಲಿ ಉಳಿಯುತ್ತದೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆಯಾದರೂ ತೆಲುಗಿನ ದೊಡ್ಡ ಚಿತ್ರವೊಂದು ಬಿಡುಗಡೆಯಾಗುತ್ತಿರುವ ಕಾರಣ ನನ್ನ ಊರಾದ ದಾವಣಗೆರೆಯಲ್ಲೇ ನಮ್ಮ ಚಿತ್ರಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ನಿರ್ದೇಶಕ ಮನೋಜ್ ಪಿ ನಡಲುಮನೆ, ತಮಗೆ ಸಹಕಾರ ನೀಡಿಯ ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.
ನಾನು ಈವರೆಗೂ ಈ ರೀತಿಯ ಪಾತ್ರ ಮಾಡಿಲ್ಲ. ನನಗೂ ಚಿತ್ರ ಒಪ್ಪಿಕೊಂಡಾಗ ಸ್ವಲ್ಪ ಭಯವಿತ್ತು. ಹೇಗೆ ಕಾಣುತ್ತೇನೋ ಎಂದು. ಈಗ ಆ ಭಯ ಹೋಗಿದೆ. ಚಿತ್ರ ಗೆಲ್ಲುತ್ತದೆ ಎಂಬ ನಂಬೆಕೆ ಇದೆ. ಅದಕ್ಕೆ ನಿಮ್ಮ ಬೆಂಬಲ ಬೇಕಾಗಿದೆ ಎನ್ನುತ್ತಾರೆ ನಾಯಕಿ ಅದಿತಿ ಪ್ರಭುದೇವ.
ಚಿತ್ರಕ್ಕೆ ಸಂಗೀತ ನೀಡಿರುವ ರಿತ್ವಿಕ್ ಮುರಳಿಧರ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು. ಸೌಂಡ್ ಡಿಸೈನರ್ ನವೀನ್ ತಮ್ಮ ಕಾರ್ಯದ ಬಗ್ಗೆ ಮಾತನಾಡಿದರು.
ಯು.ಕೆ.ಪ್ರೊಡಕ್ಷನ್ಸ್_ ಲಾಂಛನದಲ್ಲಿ
ಶ್ರೀಮತಿ ಪೂಜಾ ವಸಂತಕುಮಾರ್ ಈ
ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್
ಅವರ ಸಂಗೀತ ನಿರ್ದೇಶನವಿರುವ ಆನ ಗೆ ವಿಜೇತ್ ಚಂದ್ರ ಅವರ ಸಂಕಲನವಿದೆ.
ಅದಿತಿ ಪ್ರಭುದೇವ, ಸುನೀಲ್ ಪುರಾಣಿಕ್, ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಂಮ್, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.