ಶುರುವಾಯಿತು ಶಿವಣ್ಣನ ಹೊಸ ಸಿನಿಮಾ. ಈ ಚಿತ್ರದಲ್ಲಿ ನಟಿಸಲಿದ್ದಾರೆ ಖ್ಯಾತ ನಟ ಪ್ರಭುದೇವ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ರಾಕ್ ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ “ಪ್ರೊಡಕ್ಷನ್ ನಂ 47” ಚಿತ್ರದ ಮುಹೂರ್ತ ಸಮಾರಂಭ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯಿತು.
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅವರು ನಟಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಗೀತಾ ಶಿವರಾಜಕುಮಾರ್ ಅವರು ಆರಂಭಫಲಕ ತೋರಿದರು. ಪುಷ್ಪಕುಮಾರಿ ವೆಂಕಟೇಶ್ ಕ್ಯಾಮೆರಾ ಚಾಲನೆ ಮಾಡಿದರು.
ರಾಕ್ ಲೈನ್ ವೆಂಕಟೇಶ್ ಅವರ ಸಂಸ್ಥೆ ಅಂದರೆ ನನಗೆ ನಮ್ಮ ಮನೆಯ ಸಂಸ್ಥೆ ಇದ್ದ ಹಾಗೆ. ನನ್ನ ಅವರ ಸ್ನೇಹ ಮೂವತ್ತು ವರ್ಷಕ್ಕೂ ಹಳೆಯದು. ಸ್ನೇಹಿತರಾಗಿ ಬಂದು ನಿರ್ಮಾಪಕರಾದರು. ಇಂತಹ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ಹಾಗೂ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಅಭಿನಯಿಸುತ್ತಿರುವುದು ಸಂತಸವಾಗಿದೆ.
ಇನ್ನು ಭಾರತದ ಖ್ಯಾತ ನೃತ್ಯಗಾರ, ನಟ ಪ್ರಭುದೇವ್ ಅವರ ಜೊತೆ ಅಭಿನಯಿಸುತ್ತಿರುವುದು ಖುಷಿ ತಂದಿದೆ. ಜುಲೈ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಯೋಗರಾಜ್ ಭಟ್ ಉತ್ತಮ ಕಥೆ ಸಿದ್ದಮಾಡಿಕೊಂಡಿದ್ದಾರೆ. ಫನ್, ಎಮೋಷನ್ ಹಾಗೂ ಆಕ್ಷನ್ ಡ್ರಾಮ ಎಲ್ಲಾ ರೀತಿಯ ಅಂಶಗಳಿರುವ ಕಥೆಯಿದು.
ಎಲ್ಲರ ಮನಸ್ಸಿಗೂ ಚಿತ್ರ ಹತ್ತಿರವಾಗುತ್ತದೆ ಎಂದು ಶಿವರಾಜಕುಮಾರ್ ತಿಳಿಸಿದರು.
ಇವತ್ತು ನನಗೆ ತುಂಬಾ ಸಂತೋಷವಾಗಿದೆ. ಸಿನಿಮಾ ನಿರ್ಮಾಣ ಮಾಡಿ ತುಂಬಾ ವರ್ಷವಾಗಿತ್ತು. ಕೊರೋನ ನಂತರ ನಮ್ಮ ಸಂಸ್ಥೆಯ ಮೊದಲ ಚಿತ್ರವಿದು. ಅದರಲ್ಲೂ ಶಿವಣ್ಣ ಅವರ ಜೊತೆ ಮಾಡುತ್ತಿರುವುದು ಖುಷಿಯ ವಿಚಾರ. ಅವರ ಚಿತ್ರ ಮಾಡಲು ಒಳ್ಳೆಯ ಕಥೆ ಬೇಕಿತ್ತು. ಯೋಗರಾಜ್ ಭಟ್ ಇವತ್ತಿನ ಜನರಿಗೆ ಬೇಕಾದಂತಹ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಹೊಟ್ಟೆ ತುಂಬಾ ನಕ್ಕುನಗಿಸುವ ಚಿತ್ರವಿದು. ಕೊನೆಗೆ ಉತ್ತಮ ಸಂದೇಶ ನೀಡುವ ಚಿತ್ರವೂ ಹೌದು.
ಇಂತಹ ಒಳ್ಳೆಯ ಕಥೆ ನನಗೆ ಸಿಕ್ಕಿರುವುದು ಸಂತೋಷ. ಪ್ರಭುದೇವ ನಮ್ಮ ಚಿತ್ರದಲ್ಲಿ ನಟಿಸುತ್ತಿರುವುದು ಕೂಡ ಸಂತಸ ತಂದಿದೆ. ಎಲ್ಲಾ ಕೂಡಿ ಬರಬೇಕು ಅಂತರಲ್ಲಾ ಹಾಗೆ. ಯೋಗರಾಜ್ ಭಟ್ ಅವರ ನಿರ್ದೇಶನ, ವಿ.ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಶಿವರಾಜಕುಮಾರ್ – ಪ್ರಭುದೇವ ಅವರ ನಟನೆ ಮತ್ತು ನೃತ್ಯ ಇಷ್ಟೆಲ್ಲ ಉತ್ತಮ ಅಂಶಗಳಿರುವ ಈ ಚಿತ್ರ ಜನರ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು, ನಾನು ಒಬ್ಬ ಪ್ರೇಕ್ಷಕನಾಗಿ ಈ ಚಿತ್ರಕ್ಕಾಗಿ ಕಾಯುತ್ತಿರುವೆ ಎಂದರು.
ನಾನು, ನಿರ್ಮಾಪಕರಿಗೆ ಕಥೆ ಹೇಳುವಾಗ, ನಾವು ಯಾವಾಗ ನೀರು ಕುಡಿಯುತ್ತೇವೊ, ಆಗೆಲ್ಲಾ ಈ ಚಿತ್ರ ನೆನಪಿಗೆ ಬರಬೇಕು ಅಂತಹ ಕಥೆ ಇದು ಎಂದು ಹೇಳಿದ್ದೆ. ಆ ನಂತರ ಇನ್ನೊಂದು ಕಥೆ ಕೂಡ ಮಾಡಿಕೊಂಡಿದ್ದೆ. ಆದರೆ ರಾಕ್ ಲೈನ್ ಅವರು , ಅವತ್ತು ನೀರಿನ ಕಥೆ ಹೇಳಿದ್ದಿರಲ್ಲಾ ಅದೇ ಕಥೆ ಸಿನಿಮಾ ಮಾಡಿ ಎಂದರು.
ನಾನು ಮೊದಲಿನಿಂದಲೂ ಶಿವಣ್ಣನ ಅಭಿಮಾನಿ. ಆನವಟ್ಟಿಯಲ್ಲಿ ರಥಸಪ್ತಮಿ ಚಿತ್ರವನ್ನು ಜನಜಂಗುಳಿಯಲ್ಲಿ ನೋಡಿದ್ದು ಈಗಲೂ ನೆನಪಿದೆ.
ಶಿವಣ್ಣ ಅವರಿಗೆ ಎರಡು ವರ್ಷಗಳಿಂದ ಕಥೆ ಹೇಳುತ್ತಾ ಬಂದಿದ್ದೀನಿ. ಬರೆಯುವುದು ಬದಲಾವಣೆ ಮಾಡುವುದು ಹೀಗೆ. ಎರಡು ವರ್ಷದ ನಂತರ ಗಟ್ಟಿ ಕಥೆ ಸಿದ್ದ ಮಾಡಿಕೊಂಡಿದ್ದೇವೆ. ಫನ್, ಎಮೋಷನ್ ಜೊತೆಗೆ ತುಂಬಾ ಬ್ರಿಲಿಯೆಂಟ್ ಆದ ಆಕ್ಷನ್ ಡ್ರಾಮ ಎನ್ನಬಹುದು. ನಾನು ಈ ಚಿತ್ರದಲ್ಲಿ ತಂತ್ರಜ್ಞನಿಗಿಂತ ಹೆಚ್ಚಾಗಿ ಪ್ರೇಕ್ಷಕನಾಗಿ ಕೆಲಸ ಮಾಡುತ್ತಿದ್ದೀನಿ. ನನ್ನ ಹೆಮ್ಮೆಯ ಕ್ಷಣ ಇದು.
ಶಿವರಾಜಕುಮಾರ್ ಹಾಗೂ ಪ್ರಭುದೇವ ಇಬ್ಬರೂ ಉತ್ತಮ ನಟರು. ಅವರಿಬ್ಬರು ನಮ್ಮ ಚಿತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹ ಅಪಾರ. ಇಂತಹ ದಿಗ್ಗಜರ ಜೊತೆ ಕೆಲಸ ಮಾಡಿ ನಾನು ಏನಾದರೂ ಕಲಿಯುತ್ತೀನಿ ಎಂದರು ನಿರ್ದೇಶಕ ಯೋಗರಾಜ್ ಭಟ್.