ಲಾಕ್ಡೌನ್ನಿನಿಂದಾಗಿ ಕಳೆದ ಮೂರು ತಿಂಗಳಿಂದ ಚಿತ್ರರಂಗದ ಎಲ್ಲಾ ಕೆಲಸಗಳು ಸ್ತಬ್ಧವಾಗಿದ್ದವು. ಆದರೆ ಈಗ ಅನ್ಲಾಕ್ ಆಗಿರುವುದರಿಂದ ಕೆಲವು ಚಿತ್ರತಂಡಗಳು ತಮ್ಮ ತಮ್ಮ ಚಿತ್ರಗಳ ಕೆಲಸಗಳನ್ನು ಮುಂದುವರೆಸಿವೆ. ಆ ಸಾಲಲ್ಲಿ “ಆ ಒಂದು ಕನಸು” ಚಿತ್ರ ತಂಡವು ತನ್ನ ಕನಸಿನ ಕುದುರೆ ಏರಿದೆ. ಆ ಒಂದು ಕನಸು ಚಿತ್ರದ ಡಬ್ಬಿಂಗ್ ಕೆಲಸ ಕೊನೆಯ ಹಂತದಲ್ಲಿರುವಾಗಲೇ ಲಾಕ್ಡೌನ್ ಶುರುವಾಗಿತ್ತು.
ಲಾಕ್ಡೌನ್ ಮುಗಿಯುತ್ತಿದ್ದಂತೆ ನಿರ್ಮಾಪಕರಾದ ದಿಲೀಪ ಬಿ.ಎಂ. ಅವರು ಉಳಿದ ಕೆಲಸವನ್ನು ಮುಂದುವರೆಸುವಂತೆ ತಮ್ಮ ಚಿತ್ರತಂಡಕ್ಕೆ ಸೂಚನೆ ನೀಡಿದ್ದಾರೆ.
“ಆ ಒಂದು ಕನಸು” ಬಗ್ಗೆ ಮನಸಲ್ಲಿ ನೂರಾರು ಕನಸುಗಳನ್ನು ಕಟ್ಟಿಕೊಂಡ ನಿರ್ದೇಶಕ ವಿಷ್ಣು ನಾಚನೇಕರ್ ಅವರು ಲಾಕ್ಡೌನ್ನಿಂದಾಗಿ ತಮ್ಮ ಊರಾದ ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ಕೃಷಿಕರಾಗಿದ್ದರು. ಈಗ ಮತ್ತೇ ನಿರ್ಮಾಪಕರ ಗ್ರೀನ್ ಸಿಗ್ನಲ್ ಸಿಗುತ್ತಿದ್ದ ಹಾಗೆ, ಬೆಂಗಳೂರು ಟ್ರೈನ್ ಹತ್ತಿದ್ದಾರೆ.
ಈಗಲೂ ಚಿತ್ರತಂಡ ಮೊದಲಿನ ಅದೇ ಹುರುಪಿನಿಂದ ಬೆಂಗಳೂರಿನಲ್ಲಿರುವ ಪ್ರಸಾದ ಸ್ಟೂಡಿಯೋದಲ್ಲಿ ಡಬ್ಬಿಂಗ್ ಕಾರ್ಯ ಮುಂದುವರೆಸಿದೆ. ಚಿತ್ರದ ನಾಯಕ ವಿಶ್ವಾಸ್ ಅವರು ಡಬ್ಬಿಂಗ್ನಲ್ಲಿ ತಮ್ಮ ಪಾತ್ರಕ್ಕೆ ಮರುಜೀವ ತುಂಬುತ್ತಿದ್ದಾರೆ. ಬಹುತೇಕ ಎಲ್ಲಾ ಪಾತ್ರಗಳ ಡಬ್ಬಿಂಗದ ಕಾರ್ಯ ಮುಗಿದಿದ್ದು, ಪ್ರಮುಖ ಪಾತ್ರಗಳಿಗೆ ಹಿರಿಯ ಕಂಠದಾನ ಕಲಾವಿದೆಯಾದ ಆಶಾ ಅವರು ಡಬ್ಬಿಂಗ್ ಮಾಡುತ್ತಿದ್ದಾರೆ.
ನಾಯಕ ನಟ ವಿಶ್ವಾಸ್ ಜೊತೆ ನಾಯಕಿಯಾಗಿ ಧನ್ಯಶ್ರೀ ತೆರೆ ಹಂಚಿಕೊಂಡಿದ್ದಾರೆ. ಈ ಹಿಂದೆ ಸಾಕಷ್ಟು ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯದಿಂದ ಜನಮನ ಗೆದ್ದ ಬಲ ರಾಜವಾಡಿ ಅವರು ಇಲ್ಲಿ ಖಳನಾಯಕನಾಗಿದ್ದಾರೆ. ಈ ಚಿತ್ರದಲ್ಲಿ ನೋಡುಗರನ್ನು ನಕ್ಕು ನಗಿಸುವ ಪಾತ್ರದಲ್ಲಿ ಅಮಿತ್, ಸಸ್ಪೆನ್ಸ್ ಪಾತ್ರದಲ್ಲಿ ಚೀರಾಯು ಚಕ್ರವರ್ತಿ ಅಭಿನಯಿಸಿದ್ದಾರೆ. ಉಳಿದಂತೆ ಎಂ. ಎಸ್. ಉಮೇಶ್, ಗಿರೀಶ್ ಶಿವಣ್ಣ, ಪದ್ಮಜಾ ರಾವ್, ಕುರಿ ಬಾಂಡ್ ರಂಗ, ಮೂಗು ಸುರೇಶ್, ನರೇಶ್, ಆಶಾರಾಣಿ, ವಿಕ್ರಮಾದಿತ್ಯ, ಸಿದ್ದು, ಮಲ್ಲಿಕಾರ್ಜುನ ಎಸ್. ತುಮಕೂರು, ಬೇಲೂರು ಶಿವಣ್ಣ, ನರಸಿಂಹ ಮೂರ್ತಿ ಕೆ.ವಿ, ಸಂಪತ್ ಕಬ್ಬಾಳು, ಶಿವಕುಮಾರ ಹಲಗೂರು, ಸರೋಜಮ್ಮ, ಅಭಿನಯಿಸಿದ್ದಾರೆ.
ಈ ಚಿತ್ರವು ರಂಗು ಕ್ರಿಯೇಷನ್ ತಯಾರಿಸುತ್ತಿದ್ದು, ದಿಲೀಪ ಬಿ.ಎಂ. ಅವರು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಸಾಕಷ್ಟು ಸಿನಿಮಾ ಮತ್ತು ಧಾರವಾಹಿಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಸಾಕಷ್ಟು ಅನುಭವ ಇರುವ ಶನಿ ಧಾರವಾಹಿ ಖ್ಯಾತಿಯ ವಿಷ್ಣು ನಾಚನೇಕರ್ ಅವರು ಆ್ಯಕ್ಷನ್ -ಕಟ್ ಹೇಳುತ್ತಿದ್ದಾರೆ. ಕಥೆ-ಚಿತ್ರಕತೆ ಕೆ. ಉದಯಂ ಬರೆದಿದ್ದು, ಜೋಗಿ ಖ್ಯಾತಿಯ ಮಳವಳ್ಳಿ ಸಾಯಿಕೃಷ್ಣ ಅವರು ಸಂಭಾಷಣೆ ಬರೆದಿದ್ದಾರೆ.
ವಿನಸ್ ಮೂರ್ತಿ ಛಾಯಾಗ್ರಹಣ, ಅಭಿಶೇಕ್ ಜಿ. ರಾಯ್ ಸಂಗೀತ, ನಾಗರಾಜ್ ಜಿ ಹರಸೂರು ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ಸುಧೀಂದ್ರ ವೆಂಕಟೇಶ್ ಪತ್ರಿಕಾ ಸಂಪರ್ಕ, ಎಂ.ಪಿ. ಲೋಕೇಶ್ ಮತ್ತು ರಿಷಿಕೇಶ್ ನಿರ್ಮಾಣ ನಿರ್ವಹಣೆ, ವಿಕ್ರಮ್ ಯಶೋಧರ ಕೋ-ಡೈರೆಕ್ಟರ್, ಸಿರಿ YSR ಮತ್ತು ಗಿರೀಶ್ H.K ಸಹ ನಿರ್ದೇಶನ, ಅಜಯ್ ಪ್ರಚಾರ ಕಲೆ, ಅಮೃತ್ ಜೋಗಿ ಮಂಜುರಾಜ್ ಕಲಾ ನಿರ್ದೇಶನ, ಎಸ್. ಬದರಿನಾಥ ಸ್ಥಿರ ಚಿತ್ರಣ, ಲಕ್ಷ್ಮಣ್ ಪ್ರಸಾಧನ, ವಿಜಿಕುಮಾರ ವಸ್ತ್ರಾಲಂಕಾರ ಈ ಚಿತ್ರಕ್ಕಿದೆ.