HomeNewsಅಕ್ಟೋಬರ್ 25 ರಂದು ಬಹು ನಿರೀಕ್ಷಿತ "ಯಲಾಕುನ್ನಿ" ತೆರೆಗೆ .

ಅಕ್ಟೋಬರ್ 25 ರಂದು ಬಹು ನಿರೀಕ್ಷಿತ “ಯಲಾಕುನ್ನಿ” ತೆರೆಗೆ .

ತೆರೆಯ ಮೇಲೆ ನಟ ಭಯಂಕರ ವಜ್ರಮುನಿ ಅವರ ಗೆಟಪ್ ನಲ್ಲಿ ಕೋಮಲ್ ಕುಮಾರ್ .

ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ರವರು ನಿರ್ಮಿಸಿರುವ, ಹೊಸ ಪ್ರತಿಭೆ N R ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ,ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಯಲಾಕುನ್ನಿ” ಚಿತ್ರ ಅಕ್ಟೋಬರ್ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಿರ್ದೇಶಕ ಎನ್ ಆರ್ ಪ್ರದೀಪ್ ನನಗೆ ಈ ಚಿತ್ರದ ಕಥೆ ಹೇಳಿದಾಗ ಈ ಪಾತ್ರ ಮಾಡಲು ಕಷ್ಟ ಅಂತ ಹೇಳಿದ್ದೆ. ಆದರೆ ಅವರು ಬಿಡದೆ ನೀವು ಮಾಡುತ್ತೀರಾ ಅಂತ ಒಪ್ಪಿಸಿ ಈ ಪಾತ್ರ ಮಾಡಿಸಿದ್ದಾರೆ. ನಾನು ಮೊದಲ ಬಾರಿ ವಜ್ರಮುನಿ ಅವರ ಗೆಟಪ್ ಹಾಕಿಕೊಂಡು ಕನ್ನಡಿ ಮುಂದೆ ಬಂದು ನಿಂತಾಗ ನನಗೆ ನಾನು ಕಾಣಲಿಲ್ಲ. ವಜ್ರಮುನಿ ಅವರೆ ಕಂಡರು. ಅವರ ಆಶೀರ್ವಾದದಿಂದ ಈ ಪಾತ್ರ ಮಾಡಲು ಸಾಧ್ಯವಾಯಿತು. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ವಜ್ರಮುನಿ ಅವರ ಮೊಮ್ಮಗ ಆಕರ್ಷ್ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಸರ್ಗ ಅಪ್ಪಣ್ಣ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ನನ್ನ ಅಣ್ಣನ ಮಗ ಯತಿರಾಜ್, ಜಯಸಿಂಹ ಮುಸುರಿ, ಮಯೂರ್ ಪಟೇಲ್, ಸಾಧುಕೋಕಿಲ, ದತ್ತಣ್ಣ, ಮಿತ್ರ, ತಬಲ ನಾಣಿ, ಶಿವರಾಜ್ ಕೆ.ಆರ್ ಪೇಟೆ, ಮಾನಸಿ ಸುಧೀರ್, ಸುಮನ್ ನಗರಕರ್ ಮುಂತಾದವರು ನಮ್ಮ ಚಿತ್ರದ ತಾರಾಬಳಗದಲ್ಲಿದ್ದಾರೆ. ಧರ್ಮವಿಶ್ ಅವರ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿದೆ. ಹಾಲೇಶ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮುರಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರವನ್ನು ನನ್ನ ಶ್ರೀಮತಿ ಅನುಸೂಯಾ ಕೋಮಲ್ ಕುಮಾರ್ ಹಾಗೂ ಸಹನಾ‌ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಸಹನಾ ಮೂರ್ತಿ ಗಮನಾರ್ಹ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಜಗ್ಗೇಶ್ ಅವರ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್, ಡಿಐ ಮುಂತಾದ ಕಾರ್ಯಗಳು ನಡೆದಿದೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಅಕ್ಟೋಬರ್ 25ರಂದು ಚಿತ್ರ ಬಿಡುಗಡೆಯಾಗಲಿದೆ ಎಂದರು ನಟ ಕೋಮಲ್ ಕುಮಾರ್.

ಕೆಲವು ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿರುವ ನನಗೆ ಇದು‌ ನಿರ್ದೇಶಕನಾಗಿ ಮೊದಲ ಚಿತ್ರ. ಅವಕಾಶ ನೀಡಿದ ಕೋಮಲ್ ಕುಮಾರ್ ಹಾಗೂ ಸಹನಾ‌‌ ಮೂರ್ತಿ ಅವರಿಗೆ ಧನ್ಯವಾದ. ಈ ಸಂದರ್ಭದಲ್ಲಿ ಕೋಮಲ್ ಕುಮಾರ್, ‌ಅನುಸೂಯ ಕೋಮಲ್ ಕುಮಾರ್,‌ ಜಗ್ಗೇಶ್ ಸರ್ ಹಾಗೂ ವಜ್ರಮುನಿ ಅವರ ಕುಟುಂಬದವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳುತ್ತೇನೆ. ಕೋಮಲ್ ಕುಮಾರ್ ಅವರ ವಜ್ರಮುನಿ ಲುಕ್ ಗೆ ಈಗಾಗಲೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರು ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದು ನಿರ್ದೇಶಕ ಎನ್ ಆರ್ ಪ್ರದೀಪ ತಿಳಿಸಿದರು.

ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಅಕ್ಟೋಬರ್ 25 ರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕರಾದ ಅನುಸೂಯಾ ಕೋಮಲ್ ಕುಮಾರ್ ಹಾಗೂ ಸಹನಾ ಮೂರ್ತಿ.

ನಮ್ಮ ತಂದೆ ಅವರಿಗೆ ಹೆಸರು ತಂದುಕೊಟ್ಟ ಪಾತ್ರ ಪಡವಾರಹಳ್ಳಿ ಪಾಂಡವರು ಚಿತ್ರದ ಕನೆಕ್ಷನ್ ಕಾಳಪ್ಪ. ನಾನು ಕೂಡ ಈ ಚಿತ್ರದಲ್ಲಿ ಅದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ಜಯಸಿಂಹ ಮುಸುರಿ.‌ ‌

ಮಾರಕ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಮಯೂರ್ ಪಟೇಲ್ ಹೇಳಿದರು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ಮಿತ್ರ ತಿಳಿಸಿದರು.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು‌, ಮೂರು ಹಾಡುಗಳನ್ನು ನಿರ್ದೇಶಕರು ಹಾಗೂ ಒಂದು ಹಾಡನ್ನು ಪ್ರಮೋದ್ ಮರವಂತೆ ‌ಬರೆದಿದ್ದಾರೆ. ಆಂತೋಣಿ ದಾಸ್, ಅನಿರುಧ್ದ್ ಶಾಸ್ತ್ರಿ, ನವೀನ್ ಸಜ್ಜು, ಶಶಾಂಕ್ ಶೇಷಗಿರಿ ಹಾಗೂ ನಾನು ಹಾಡಿದ್ದೇವೆ ಎಂದು ಹಾಡುಗಳು ಹಾಗೂ ಹಾಡಿದವರ ಬಗ್ಗೆ ಸಂಗೀತ ನಿರ್ದೇಶಕ ಧರ್ಮವಿಶ್ ಮಾಹಿತಿ ನೀಡಿದರು.

ತಮ್ಮ ತಾತಾ ವಜ್ರಮುನಿ ‌ಅವರ “ಪ್ರಚಂಡ ರಾವಣ” ಚಿತ್ರದ ಪ್ರಸಿದ್ದ ಸಂಭಾಷಣೆ ಹೇಳಿ ಎಲ್ಲರ ಗಮನ ಸೆಳೆದ ವಜ್ರಮುನಿ ಅವರ ಮೊಮ್ಮಗ ಆಕರ್ಷ್ “ಯಲಾಕುನ್ನಿ” ಚಿತ್ರದ ತಮ್ಮ ಪಾತ್ರ ಬಗ್ಗೆ ಕೂಡ ಮಾಹಿತಿ ನೀಡಿದರು. ಛಾಯಾಗ್ರಾಹಕ ಹಾಲೇಶ್ , ಸಹನಾ ಮೂರ್ತಿ ಅವರ ಸಹೋದರ ಶಂಕರ್, ವಜ್ರಮುನಿ ಅವರ ಮಗ ಜಗದೀಶ್ ಹಾಗೂ ಸೊಸೆ ರೇಖಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Must Read

spot_img
Share via
Copy link
Powered by Social Snap