ಸಮಂತಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರವಾದ ‘ಯಶೋದಾ’ದ ಟೀಸರ್ ಇಂದು ಬಿಡುಗಡೆಯಾಗಿದೆ. ಪ್ರೇಕ್ಷಕರು ಹಿಂದೆಂದೂ ನೋಡದ ಸಮಂತಾ ಅವರ ಇನ್ನೊಂದು ಮುಖವನ್ನು ಈ ಟೀಸರ್ನಲ್ಲಿ ಅನಾವರಣಗೊಳಿಸಲಾಗಿದೆ.
ಈ ಚಿತ್ರದಲ್ಲಿ ಸಮಂತಾ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದು, ವೈದ್ಯರು ಯಾವುದನ್ನು ಬೇಡ ಎಂದು ಸಲಹೆ ನೀಡಿರುತ್ತಾರೋ, ಅವನ್ನೆಲ್ಲ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಸೀಟಿನ ಅಂಚಿಗೆ ಕೂರಿಸುವಂತ ರೋಮಾಂಚಕ ಆಕ್ಷನ್ ದೃಶ್ಯಗಳಿರುವ ಈ ಟೀಸರ್ನಲ್ಲಿ ಅನಿವಾರ್ಯ ಮತ್ತು ಅತ್ಯಂತ ಅಪಾಯಕಾರಿ ಸಂದರ್ಭಗಳನ್ನು ಸಮಂತಾ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನೋಡಬಹುದು. ಸಮಂತಾ ಈ ಹಿಂದಿನ ಚಿತ್ರಗಳಲ್ಲಿ ಮಾಡದಿರುವ ಕೆಲಸಗಳನ್ನು ಈ ಚಿತ್ರದಲ್ಲಿ ಮಾಡಿದ್ದಾರೆ ಎನ್ನುತ್ತದೆ ಚಿತ್ರಂಡ. ಅದು ಏನು ಮತ್ತು ಯಾಕೆ ಎಂದು ಟೀಸರ್ ಸುಳಿವು ನೀಡಿದ್ದು, ಚಿತ್ರದ ಪೂರ್ಣಪಾಠ ಗೊತ್ತಾಗಬೇಕಿದ್ದರೆ, ಚಿತ್ರ ಬಿಡುಗಡೆಯಾದಾಗಲೇ ನೋಡಬೇಕು.
ಈ ಚಿತ್ರದಲ್ಲಿ ಉನ್ನಿಮುಕುಂದನ್ ವೈದ್ಯನಾಗಿ ಕಾಣಿಸಿಕೊಂಡಿದ್ದು, ಟೀಸರ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಪ್ರತಿ ದೃಶ್ಯ ಸಹ ಶ್ರೀಮಂತವಾಗಿ ಮೂಡಿಬಂದಿರುವುದರ ಜತೆಗೆ ತಾಂತ್ರಿಕವಾಗಿ ಅದ್ಭುತವಾಗಿ ಮೂಡಿಬಂದಿದೆ.
ಅಂದಹಾಗೆ, ‘ಯಶೋದಾ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತದ ಬಂದಿದ್ದು, ಸದ್ಯದಲ್ಲೇ ವಿಶ್ವದಾದ್ಯಂತ ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪ್ರತಿಭಾವಂತ ನಿರ್ದೇಶಕ ಜೋಡಿ ಹರಿ-ಹರೀಶ್ ನಿರ್ದೇಶಿಸಿರುವ ಅದ್ಭುತ ಸಾಹಸ ದೃಶ್ಯಗಳನ್ನು ಹೊಂದಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರಕ್ಕೆ ಯಾವುದೇ ಕೊರತೆ ಉಂಟಾಗದಿರುವಂತೆ ನಿರ್ಮಾಪಕ ಶಿವಲೆಂಕ ಕೃಷ್ಣಪ್ರಸಾದ್ ನೋಡಿಕೊಂಡಿದ್ದು, ಅದ್ಧೂರಿಯಾಗಿ ನಿರ್ಮಿಸಿದ್ದಾರೆ.
‘ಯಶೋದಾ’ ಚಿತ್ರದಲ್ಲಿ ಸಮಂತಾ ಜೊತೆಗೆ ವರಲಕ್ಷ್ಮೀ ಶರತ್ಕುಮಾರ್, ಉನ್ನಿ ಮುಕುಂದನ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡಿದ್ದು, ಚಿತ್ರಕ್ಕೆ ‘ಮೆಲೋಡಿ ಬ್ರಹ್ಮ’ ಎಂದೇ ಖ್ಯಾತರಾದ ಮಣಿಶರ್ಮ ಸಂಗೀತ ಸಂಯೋಜಿಸಿದ್ದಾರೆ.