ಹಾಡಿನ ಚಿತ್ರೀಕರಣ ಬಾಕಿ, 15ರಿಂದ ಎಲ್ಲ ಭಾಷೆಗಳ ಡಬ್ಬಿಂಗ್ ಶುರು..
ಶ್ರೀದೇವಿ ಮೂವಿಸ್ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಬಹುನಿರೀಕ್ಷಿತ ಮತ್ತು ಕೌತುಕಭರಿತ “ಯಶೋದ” ಸಿನಿಮಾ ತಂಡ ಇತ್ತೀಚೆಗಷ್ಟೇ ಸಣ್ಣ ವಿಡಿಯೋ ತುಣುಕನ್ನು ಹೊರತಂದಿತ್ತು. ಇದೀಗ ಸದ್ದಿಲ್ಲದೆ ಚಿತ್ರದ ಶೂಟಿಂಗ್ ಮುಗಿಸಿ, ಹಾಡಿನ ಚಿತ್ರೀಕರಣವೊಂದನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ನಾಯಕಿ ಪ್ರಧಾನ ಈ ಸಿನಿಮಾದಲ್ಲಿ ಸಮಂತಾ ರುತ್‌ಪ್ರಭು “ಯಶೋದ” ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀದೇವಿ ಪ್ರೊಡಕ್ಷನ್‌ನ ೧೪ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದರೆ, ಶಿವಲೆಂಕಾ ಕೃಷ್ಣ ಪ್ರಸಾದ್ ನಿರ್ಮಿಸಿದ್ದಾರೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಶಿವಲೆಂಕಾ, ” ಸರಿಸುಮಾರು 100 ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದೇವೆ. ಒಂದೇ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಬಜೆಟ್ ವಿಚಾರವಾಗಿ ಎಲ್ಲಿಯೂ ಕಾಂಪ್ರಮೈಸ್ ಆಗದೆ, ಕಥೆ ಬೇಡಿದಷ್ಟು ಹೂಡಿಕೆ ಮಾಡಿದ್ದೇವೆ. ಇತ್ತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿದ್ದು, ಸಿಜೆ ಕೆಲಸಗಳು ನಡೆಯುತ್ತಿವೆ. ಇದೇ ತಿಂಗಳ 15ರಿಂದ ಡಬ್ಬಿಂಗ್ ಕೆಲಸ ಶುರುವಾಗಲಿದೆ. ಇದರ ಜತೆಗೆ ಬೇರೆ ಭಾಷೆಯ ಡಬ್ಬಿಂಗ್ ಸಹ ಮುಗಿಸಿಕೊಳ್ಳುವ ಪ್ಲಾನ್ ಇದೆ. ಇದೆಲ್ಲದರ ಜತೆಗೆ ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಪ್ರಚಾರ ಕೆಲಸಕ್ಕೂ ಚಾಲನೆ ನೀಡಲಿದ್ದೇವೆ.
“ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ ಇದಾಗಿದ್ದು, ಜಗತ್ತಿನಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ. ಸಮಂತಾ ಅವರು ಚಿತ್ರದಲ್ಲಿ ಟೈಟಲ್ ರೋಲ್ ಪಾತ್ರ ನಿಭಾಯಿಸಿದ್ದಾರೆ. ಅಷ್ಟೇ ಪ್ರಮಾಣದ ಸಾಹಸ ದೃಶ್ಯಗಳೂ ಈ ಚಿತ್ರದಲ್ಲಿವೆ. ಈ ನಮ್ಮ ಚಿತ್ರವನ್ನು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲಿದ್ದೇವೆ. ಶೀಘ್ರದಲ್ಲಿಯೇ ಚಿತ್ರದ ಟೀಸರ್ ಮತ್ತು ಹಾಡನ್ನು ಬಿಡುಗಡೆ ಮಾಡಲಿದ್ದೇವೆ” ಎಂದಿದ್ದಾರೆ.
ಅಂದಹಾಗೆ, ಇದು ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದ್ದು, ಆಗಸ್ಟ್ ೧೨ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಸ್ಟಾರ್ ನಟರ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ, ಸಂಪತ್ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್, ದಿವ್ಯಾ ಶ್ರೀಪಾದ್, ಪ್ರಿಯಾಂಕಾ ಶರ್ಮಾ ಸೇರಿ ಹಲವರಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಮಣಿಶರ್ಮಾ ಸಂಗೀತ, ಪಲ್ಗುಮ್ ಚಿನ್ನರಾಯನ, ಡಾ. ಚಲ್ಲ ಭಾಗ್ಯಲಕ್ಷ್ಮಿ ಸಂಭಾಷಣೆ, ಚಂದ್ರಬೋಸ್ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ, ಎಂ. ಸುಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಮಾರ್ತಾಂಡ್ ವೆಂಕಟೇಶ್ ಸಂಕಲನ ಮಾಡುತ್ತಿದ್ದಾರೆ.