ಕಾಡುವಂಥ ಪ್ರೇಮಕಥೆಗಳನ್ನು ತೆರೆಮೇಲೆ ಮೂಡಿಸಿದ ನಿರ್ದೇಶಕ ನಾಗಶೇಖರ್ ಇದೀಗ ಕನ್ನಡ ಸಿನಿರಸಿಕರಿಗಾಗಿ ಮತ್ತೊಂದು ಅದ್ಭುತ ಲವ್ ಸ್ಟೋರಿಯನ್ನು ಹೇಳಹೊರಟಿದ್ದಾರೆ. ದಶಕದ ಹಿಂದೆ ತಮ್ಮದೇ ನಿರ್ದೇಶನದಲ್ಲಿ ತೆರೆಕಂಡು, ಜನಮನ ಸೂರೆಗೊಂಡು ಯಶಸ್ವಿಯಾಗಿದ್ದ ಸಂಜು ವೆಡ್ಸ್ ಗೀತಾ ಚಿತ್ರದ ಟೈಟಲ್ ಇಟ್ಟುಕೊಂಡು ನವನವೀನ ಪ್ರೇಮಕಥೆ ಹೆಣೆದು ಸಂಜು ವೆಡ್ಸ್ ಗೀತಾ-2 ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.
ಶ್ರೀನಗರ ಕಿಟ್ಟಿ ಹಾಗೂ ಗುಳಿಕೆನ್ನೆ ಬೆಡಗಿ ರಚಿತಾರಾಮ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ನಡೆಯಿತು. ನಾಯಕ ಸಂಜು ಹಾಗೂ ನಾಯಕಿ ಗೀತಾ ಇಬ್ಬರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬರುವ ಪಾರ್ಟಿ ಸಾಂಗ್ ಅದಾಗಿದ್ದು, ವಿಶೇಷವಾಗಿ ಈ ಹಾಡಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇವರಿಬ್ಬರ ಜೊತೆ ಸ್ಟೆಪ್ಸ್ ಹಾಕಿದ್ದಾರೆ. ಕುಂಬಳಗೋಡಿನ ಬಿಜಿಎಸ್ ಹೈಸ್ಕೂಲಿನ ಗ್ಲಾಸ್ ಹೌಸ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಿತು. 200 ರಿಂದ 250 ಜನ ಡಾನ್ಸರ್ಸ್ ಈ ಹಾಡಲ್ಲಿ ಹೆಜ್ಜೆ ಹಾಕಿದ್ದಾರೆ. ಖ್ಯಾತ ಗಾಯಕಿ ಮಂಗ್ಲಿ ಈ ಹಾಡಿಗೆ ದನಿಯಾಗಿದ್ದು, ಭಜರಂಗಿ ಮೋಹನ್ ಅವರು ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವರ್ಷದ ಸೂಪರ್ ಹಿಟ್ ಸಾಂಗ್ ಇದಾಗಲಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, 2 ಫೈಟ್ಸ್, ಒಂದು ಹಾಡಿನ ಪ್ಯಾಚ್ ವರ್ಕ್ ಮಾತ್ರವೇ ಬಾಕಿಯಿದೆ.
ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಥೆ ಈ ಚಿತ್ರದಲ್ಲಿದೆ.
ಈಗಾಗಲೇ ಚಿತ್ರದ ಎಡಿಟಿಂಗ್ ಮುಗಿದು, ಡಬ್ಬಿಂಗ್ ಕೂಡ ಕೊನೇ ಹಂತದಲ್ಲಿದೆ. ಚಿತ್ರಕ್ಕೆ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ ಮೂರನೇ ಹಂತದ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ 50 ಲಕ್ಷ ರೂ.ಗಳ ವೆಚ್ಚದಲ್ಲಿ ಕುಣಿಗಲ್ ನ ಯುಬಿ ಸ್ಟೆಡ್ ಫಾರಂ(ಕುದುರೆ ಫಾರಂ)ನಲ್ಲಿ ಸುಮಾರು 5 ದಿನಗಳವರೆಗೆ ಅದ್ದೂರಿಯಾಗಿ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಹೀಗೆ ಚಿತ್ರಕಥೆಯಷ್ಟೇ ಪ್ರಾಮುಖ್ಯತೆಯನ್ನು ಚಿತ್ರದ ಹಾಡುಗಳಿಗೂ ಸಹ ನೀಡಲಾಗಿದ್ದು, ಒಂದು ಸಿನಿಮಾಗಾಗುವಷ್ಟು ಖರ್ಚನ್ನು ನಿರ್ಮಾಪಕ ಛಲವಾದಿ ಕುಮಾರ್ ಅವರು ಹಾಡುಗಳಿಗೇ ಮಾಡುವ ಮೂಲಕ ಅದ್ದೂರಿತನಕ್ಕೆ ಎಲ್ಲೂ ಕೊರತೆ ಬಾರದಂತೆ ನೋಡಿಕೊಂಡಿದ್ದಾರೆ. ಅಲ್ಲದೆ ಹಾಡುಗಳನ್ನು ಹಾಸನ ಮತ್ತು ಹಾವೇರಿಯಲ್ಲಿ ಅದ್ದೂರಿ ಸಮಾರಂಭದಲ್ಲಿ
ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ನಿರ್ಮಾಪಕ ಛಲವಾದಿ ಕುಮಾರ್ ಅವರು ಈ ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ನಾಗಶೇಖರ್ ಅವರ ಕಥೆ, ಚಿತ್ರಕಥೆ ನಿರ್ದೇಶನ ಚಿತ್ರಕ್ಕಿದ್ದು ಶ್ರೀಧರ ವಿ. ಸಂಭ್ರಮ್ ೫ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ. ರಾಗಿಣಿ ದ್ವಿವೇದಿ, ಚೇತನ್ ಚಂದ್ರ,(ಕೆಮಿಯೋ), ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ. A 24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡುತ್ತಿದೆ.