ಮಿರಾಕಲ್ ಮಂಜು ನಿರ್ದೇಶನದ ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ರಾಘವೇಂದ್ರ ರಾಜಕುಮಾರ್.
ಕೊರೋನ ದೂರವಾಗಿದೆ. ಯುಗಾದಿ ಮರಳಿ ಬಂದಿದೆ. ಹೊಸಹೊಸ ಚಿತ್ರಗಳು ಆರಂಭವಾಗುತ್ತಿದೆ..
ಸಂಗೀತ ಹಾಗೂ ಗೀತರಚನೆಕಾರರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮಿರಕಲ್ ಮಂಜು ನಿರ್ದೇಶನದ ಎರಡನೇ ಚಿತ್ರ “ಸಂಸಾರ ಸಾಗರ” . ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು.
ಚಿತ್ರದ ಪ್ರಮುಖಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅಭಿನಯಿಸುತ್ತಿದ್ದಾರೆ. ದೀಕ್ಷಿತ್ ಧನುಷ್ ಹಾಗೂ ಆನಂದ್ ಆರ್ಯ ಈ ಚಿತ್ರದ ನಾಯಕರು. ರಕ್ಷ, ಭೂಮಿಕ ಹಾಗೂ ಲಕ್ಷ ಶೆಟ್ಟಿ ನಾಯಕಿಯರು. ಎಸ್ ನಾರಾಯಣ್,
ಟೆನ್ನಿಸ್ ಕೃಷ್ಣ, ಟೆನ್ನಿಸ್ ಕೃಷ್ಣ,
ರೇಖಾದಾಸ್ ಸೇರಿದಂತೆ ಹಿರಿಯ ಕಲಾವಿದರ ದಂಡು ಈ ಚಿತ್ರದಲ್ಲಿದೆ.
ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮೊದಲು ನಿರ್ದೇಶಕ ಮಿರಕಲ್ ಮಂಜು ಮಾತನಾಡಿದರು. ಮೊದಲು ಅವಕಾಶ ನೀಡಿದ ನಿರ್ಮಾಪಕ ನಟರಾಜ್ ಹಾಗೂ ಕೋಮಲ ನಟರಾಜ್ ಅವರಿಗೆ ವಂದಿಸುತ್ತೇನೆ. ನನ್ನ ಮೊದಲ ನಿರ್ದೇಶನದ “ಮಾರಕಾಸ್ತ್ರ” ಚಿತ್ರದ ನಿರ್ಮಾಪಕರು ಇವರೆ. ಈಗ ಎರಡನೇ ಚಿತ್ರ ನಿರ್ದೇಶಿಸಲು ಹೇಳಿದ್ದಾರೆ. ಚಿತ್ರಕ್ಕೆ ಇಂದು ಚಾಲನೆ ನೀಡಿದ್ದೇವೆ. ಕೆಲವು ದಿನಗಳ ಬಳಿಕ ಚಿತ್ರೀಕರಣ ಆರಂಭಿಸಲಿದ್ದೇವೆ. ಮೂರು ಜೋಡಿಗಳ ಸುತ್ತ ನಮ್ಮ ಚಿತ್ರದ ಕಥೆ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಸಿ ಮದುವೆಯಾದಾಗ ಇದ್ದ ಪ್ರೀತಿ ನಂತರ ಕಡಿಮೆಯಾಗುತ್ತಿದೆ. ಆ ರೀತಿಯಾದಾಗ ಎಲ್ಲರ ಸಂಸಾರದಲ್ಲಿ ಏನಾಗುತ್ತದೆ? ಎಂಬುದೇ ಚಿತ್ರದ ಕಥಾಹಂದರ . ನನಗೆ ಮೊದಲಿಂದಲೂ ದೊಡ್ಡಮನೆ ಮೇಲೆ ಪ್ರೀತಿ. ಅಂತಹ ಮನೆಯ ಸರಳ ವ್ಯಕ್ತಿ ರಾಘಣ್ಣ ನಮ್ಮ ಸಿನಿಮಾದಲ್ಲಿ ನಟಿಸುತ್ತಿರುವುದು ನಮಗೆಲ್ಲಾ ಹೆಮ್ಮೆ ಎಂದರು ನಿರ್ದೇಶಕ ಮಿರಕಲ್ ಮಂಜು.
ನನಗೆ ನಿರ್ದೇಶಕರು ಹೇಳಿದ ಕಥೆ ಹಿಡಿಸಿತು. ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿದ್ದೇನೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜಕುಮಾರ್ ಹಾರೈಸಿದರು.
ಎಲ್ಲರೂ ಇಷ್ಟಪಡುವ ಕಥೆ ಆಯ್ಕೆ ಮಾಡಿಕೊಂಡಿದ್ದೇವೆ. ಕೌಟುಂಬಿಕ ಕಥಾಹಂದರ ಎನ್ನಬಹುದು. ಉತ್ತಮ ಚಿತ್ರವನ್ನು ಜನಕ್ಕೆ ನೀಡುವ ಆಸೆ ನಮ್ಮದು. ಈ ನಮ್ಮ ಆಸೆ ನಿಮ್ಮ ಮೂಲಕ ಜನಕ್ಕೆ ತಲುಪಲಿ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ಮಾಪಕ ನಟರಾಜ್.
ಇತ್ತೀಚಿನ ದಿನಗಳಲ್ಲಿ ಹಿರಿಯ ಪೋಷಕ ಕಲಾವಿದರಿಗೆ ಅಷ್ಟು ಅವಕಾಶ ಸಿಗುತ್ತಿಲ್ಲ. ಈ ಚಿತ್ರದ ನಿರ್ಮಾಪಕ-ನಿರ್ದೇಶಕರು ಸಾಕಷ್ಟು ಹಿರಿಯ ಕಲಾವಿದರಿಗೆ ಅವಕಾಶ ನೀಡಿದ್ದಾರೆ ಅವರಿಗೆ ನನ್ನ ಧನ್ಯವಾದವೆಂದರು ಟೆನ್ನಿಸ್ ಕೃಷ್ಣ.
ನನಗೆ ಈ ಚಿತ್ರದಲ್ಲಿ ನಟಿಸಲು ಅವಾಕಾಶ ಕಲ್ಪಿಸಿದ ಟೆನ್ನಿಸ್ ಕೃಷ್ಣ ಹಾಗೂ ಚಿತ್ರತಂಡಕ್ಕೆ ನಾನು ಆಭಾರಿ. ಇದು ನನ್ನ ಹಾಗೂ ಟೆನ್ನಿಸ್ ಕೃಷ್ಣ ಜೋಡಿಯ ನೂರ ಒಂದನೇ ಚಿತ್ರ ಎಂದರು ರೇಖಾದಾಸ್.
ಚಿತ್ರದ ಮೂವರು ನಾಯಕರು, ನಾಯಕಿಯರು ಹಾಗೂ ಚಿತ್ರತಂಡದ ಸದಸ್ಯರು “ಸಂಸಾರ ಸಾಗರ” ದ ಬಗ್ಗೆ ಮಾತನಾಡಿದರು.