ರೇಸರ್’ ಸಿನಿಮಾ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರು ಆಗಿರುವ ವಿಷ್ಣುಕಾಂತ್ ಪುತ್ರ ಭರತ್ ವಿಷ್ಣುಕಾಂತ್ ನಿರ್ದೇಶನಕ್ಕಿಳಿದಿರುವುದು ಗೊತ್ತೇ ಇದೆ. ಬೈಕ್ ರೇಸಿಂಗ್ ಕುರಿತ ನೈಜ ಘಟನೆ ಆಧಾರಿತ ಈ ಚಿತ್ರದ ಹೀರೋಯಿನ್ ಇಂಟ್ರೂಡಕ್ಷನ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ತೆಲುಗು ಸೀರಿಯಲ್ ಮೂಲಕ ನಟನಾ ವೃತ್ತಿ ಆರಂಭಿಸಿದ್ದ ಅಕ್ಷಿತಾ ಸತ್ಯನಾರಾಯಣ್ ರೇಸರ್ ಮೂಲಕ ಕನ್ನಡ ಸಿನಿಮಾ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಮೂಲತಃ ಕನ್ನಡದವರೇ ಆದ ಅಕ್ಷಿತಾ ಮಾಡೆಲ್ ಜಗತ್ತಿಗೆ ಚಿರಪರಿಚಿತರು. 2020ರ ಮಿಸ್ ಸೌತ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡುವ ಅವರೀಗ ನಾಯಕಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ
ಮೊದಲೇ ಹೇಳಿದಂತೆ ರೇಸರ್, ಗ್ಯಾರೇಜ್ ನಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಅದಕ್ಕೆ ಸಿನಿಮ್ಯಾಟಿಕ್ ಟಚ್ ಕೊಟ್ಟು ಕಥೆ ಹೆಣೆಯಲಾಗಿದೆ. ಅದಕ್ಕಾಗಿ ನಾಯಕಿ ಅಕ್ಷಿತಾ ಸತ್ಯನಾರಾಯಣ್ ಬೈಕ್ ರೇಸ್ ಕಲಿತಿದ್ದಾರೆ. ದುಬಾರಿ ಬೆಲೆ ಬೈಕ್ ಏರಿ ಅಕ್ಷಿತಾ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿರುವ ಮೋಷನ್ ಪೋಸ್ಟರ್ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಅಂದಹಾಗೇ ಅಕ್ಷಿತಾ ಸಿನಿಮಾದಲ್ಲಿ ಬಬ್ಲಿ ಹುಡುಗಿಯಾಗಿ ಪಾತ್ರ ನಿಭಾಯಿಸಿದ್ದಾರೆ.
ಕಳೆದ ಜನವರಿಯಲ್ಲಿ ಸೆಟ್ಟೇರಿದ್ದ ರೇಸರ್ ಸಿನಿಮಾದ 35ರಷ್ಟು ಭಾಗ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದೇ ತಿಂಗಳಾತ್ಯಂತಕ್ಕೆ ಹಾಡುಗಳ ಚಿತ್ರೀಕರಣ ನಡೆಯಲಿದೆ. ಭಾಯ್ ಎಂಬ ದೊಡ್ಡ ಪಾತ್ರಕ್ಕಾಗಿ ಮಲಯಾಳಂ, ಕನ್ನಡದ ಇಬ್ಬರು ದೊಡ್ಡ ಸ್ಟಾರ್ ಗಳನ್ನು ಅಪ್ರೋಚ್ ಮಾಡಲಾಗಿದೆ. ಸಂದೇಶ್ ಪ್ರಸನ್ನ ನಾಯಕನಾಗಿ ನಟಿಸುತ್ತಿದ್ದು, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಬಾಲ ರಾಜ್ವಾಡಿ, ಕಾಮಿಡಿ ಕಿಲಾಡಿ ಸೂರಜ, ಸ್ವಾತಿ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಮೈಸೂರು ಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ಭರತ್ ವಿಷ್ಣುಕಾಂತ್ ನಿರ್ದೇಶನದ ಜೊತೆಗೆ ಭರತ್ ಫಿಲಂಸ್ ನಡಿ ತಾವೇ ರೇಸರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.