ಸಿನಿಮಾ ಅಭಿಮಾನಿಗಳು ಸೇರಿ ಆಡುವಂತಹ ಕ್ರಿಕೆಟ್ ಪಂದ್ಯಾಟ, ನಮ್ ಟಾಕೀಸ್ ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್(FCL)ಗೆ ಮುಹೂರ್ತ ಫಿಕ್ಸ್ !
ಕ್ರಿಕೆಟ್ ಹಾಗು ಸಿನಿಮಾ ನಮ್ಮಲ್ಲಿ ಅದೆಷ್ಟೋ ಜನರ ಜೀವನದ ಅತೀ ಮುಖ್ಯ ಭಾಗಗಳು ಎಂದರೆ ತಪ್ಪಾಗದು. ಅನುದಿನ ನಡೆವ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನ, ಪ್ರತೀ ವಾರ ಬಿಡುಗಡೆಯಾಗೋ ವಿವಿಧ ಬಗೆಯ ಸಿನಿಮಾಗಳನ್ನ ನೋಡಿ ಅವುಗಳಲ್ಲೇ ನಮ್ಮ ಖುಷಿ, ದುಃಖ ಎಲ್ಲವನ್ನೂ ಹಂಚಿಕೊಳ್ಳೋರು ನಾವು. ಕ್ರಿಕೆಟ್ ನ ವಿವಿಧ ಪರಿಗಳನ್ನ ನಾವು ನೋಡಿದ್ದೇವೆ, ಕ್ರಿಕೆಟ್ ಹಾಗು ಸಿನಿಮಾರಂಗದ ಸಮಾಗಮದಲ್ಲಿ ನಡೆವ ಪಂದ್ಯಾಟಗಳನ್ನು ಕೂಡ ಕಂಡಿದ್ದೇವೆ. ಇವೆಲ್ಲದರ ನಡುವೆ ಎಲ್ಲರ ಗಮನ ಸೆಳೆವ ಇನ್ನೊಂದು ಕ್ರಿಕೆಟ್ ಪಂದ್ಯಾಟ ಫ್ಯಾನ್ಸ್ ಕ್ರಿಕೆಟ್ ಲೀಗ್! ಹೆಸರೇ ಹೇಳುವಂತೆ ಇದು ಸಿನಿಮಾ ಸ್ಟಾರ್ ಗಳ ಅಭಿಮಾನಿಗಳು ಜೊತೆಯಾಗಿ ಆಡುವಂತಹ ಕ್ರಿಕೆಟ್ ಪಂದ್ಯಾಟ! ಈ ವಿಶೇಷ ಕ್ರಿಕೆಟ್ ಸರಣಿ ಈಗಾಗಲೇ ಹತ್ತು ಆವೃತ್ತಿಗಳನ್ನ ಪೂರೈಸಿ ಇದೀಗ ಹನ್ನೊಂದನೇ ಆವೃತ್ತಿಯ ತಯಾರಿಯಲ್ಲಿದೆ. ಇದರ ದಿನಾಂಕ ಕೂಡ ಇಟ್ಟಾಗಿದೆ.
ಸಿನಿಮಾ ಹಾಗು ಕ್ರಿಕೆಟ್ ಸುದ್ದಿಗಳನ್ನ ಕನ್ನಡಿಗರಿಗೆ ಹಿತವಾಗಿ ತಲುಪಿಸುವ ಖ್ಯಾತಿಯ ನಮ್ ಟಾಕೀಸ್ ಸಂಸ್ಥೆ ಈ ಫ್ಯಾನ್ಸ್ ಕ್ರಿಕೆಟ್ ಲೀಗ್ ನ ಆಯೋಜಕರು. ಸಂಸ್ಥೆಯ ಮುಖ್ಯಸ್ಥರಾದ ಭರತ್ ಅವರ ಮುಂದಾಳತ್ವದಲ್ಲಿ, ಬಿರುಸಿನ ಓಡಾಟದಲ್ಲಿ ಈ ಕ್ರೀಡಾಕೂಟ ಆಯೋಜನೆ ಕಾಣುತ್ತದೆ. ಕಳೆದ ಹತ್ತು ಆವೃತ್ತಿಗಳಲ್ಲಿ ಸ್ಯಾಂಡಲ್ವುಡ್ ನ ವಿವಿಧ ಸ್ಟಾರ್ ನಟರ ಅಭಿಮಾನಿಗಳು ತಂಡವಾಗಿ, ತಮ್ಮ ಒಗ್ಗಟ್ಟು ತೋರುತ್ತಾ ಈ ಪಂದ್ಯಾಟದಲ್ಲಿ ಆಡಿದ್ದಾರೆ. ಈ ಸಲ ಕೂಡ ಅದೇ ಮುಂದುವರೆಯಲಿದ್ದು, ಒಟ್ಟು ಹನ್ನೆರಡು ತಂಡಗಳು ಈ ಸಿನಿ-ಕ್ರಿಕೆಟ್ ಹಬ್ಬದಲ್ಲಿ ಪಾಲ್ಗೊಳ್ಳಲಿವೆ. ಹೊಸ ವರ್ಷದ ಆರಂಭದಲ್ಲಿ, 2024ರ ಜನವರಿ 27 ಹಾಗು 28ರಂದು ನಮ್ ಟಾಕೀಸ್ ಆಯೋಜನೆಯ ಈ ಫ್ಯಾನ್ಸ್ ಕ್ರಿಕೆಟ್ ಲೀಗ್-11 ನಡೆಯುವುದಾಗಿ ಯೋಜನೆ ರೂಪಿಸಲಾಗಿದೆ.
ಈ ಕ್ರಿಕೆಟ್ ಸರಣಿಯ ಮತ್ತೊಂದು ವಿಶೇಷವೆಂದರೆ, ಪ್ರತೀ ಸಾರಿ ನಡೆವಾಗಲೂ, ನಮ್ಮ ಚಂದನವನದ ವಿವಿಧ ಮೇರುನಟರು, ಹಿರಿಯ ಕಲಾವಿದರಿಗೆ ಗೌರವ ಸಲ್ಲಿಸುವಂತೆ, ಅವರ ಹೆಸರಿನಲ್ಲಿ, ಅವರಿಗೆ ಕಾಣಿಕೆ ಎಂಬಂತೆ ಕ್ರೀಡಾಕೂಟ ನಡೆಸಲಾಗುತ್ತದೆ. ಈ ಹಿಂದೆ ನಡೆದ ಹತ್ತನೇ ಆವೃತ್ತಿ, FCL-10 ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಆಶೀರ್ವಾದದಿಂದ ನಡೆದಿತ್ತು. ಇನ್ನೇನು ಜರುಗಲಿರುವ ಈ ಸಾಲಿನ FCL-11 ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಖಳನಟ, ಕಣ್ಣಲ್ಲೇ ನಡುಗಿಸುತ್ತಿದ್ದ ಕಲಾವಿದ ತೂಗುದೀಪ ಶ್ರೀನಿವಾಸ್ ಅವರ ಸ್ಮರಣೆಯಲ್ಲಿ, ಅವರ ಆಶೀರ್ವಾದದ ಜೊತೆಗೆ ನಡೆಯಲಿದೆ.
ನಮ್ ಟಾಕೀಸ್ ಭರತ್ ಅವರ ಆಯೋಜನೆಯಲ್ಲಿ ಹತ್ತು ಯಶಸ್ವಿ ಆವೃತ್ತಿಗಳನ್ನ ಕಂಡಿರುವ ಈ ಫ್ಯಾನ್ಸ್ ಕ್ರಿಕೆಟ್ ಲೀಗ್ ಇದೀಗ ತನ್ನ ಹನ್ನೊಂದನೇ ಆವೃತ್ತಿಗೆ ಸಜ್ಜಾಗುತ್ತಿದೆ. ತಾವು ನಡೆಸುವ ಸಿನಿಮಾ ಪ್ರಚಾರ, ಪ್ರಮೋಷನ್ ಗಳ ಕೆಲಸದ ನಡುವೆ, ಕ್ರಿಕೆಟ್ ನ ಮನರಂಜನೆಗೆ ನಮ್ ಟಾಕೀಸ್ ಎಡೆ ಮಾಡಿಕೊಡುತ್ತಲೇ ಬಂದಿದೆ. ಸಿನಿಮಾರಂಗದ ಅಭಿಮಾನಿಗಳನ್ನ ಒಗ್ಗಟ್ಟನ್ನ ಹೆಚ್ಚಿಸುವ ನಿಟ್ಟಿನಲ್ಲಿ ಆರಂಭವಾದ ಈ ಕ್ರಿಕೆಟ್ ಪಂದ್ಯಾಟ ಇಂದು ಎಲ್ಲರ ಮೆಚ್ಚುಗೆ ಪಡೆಯುತ್ತಾ ಯಶಸ್ಸು ಕಾಣುತ್ತಿದೆ. ಇದೇ ಜನವರಿ 27 ಹಾಗು 28ರಂದು ನಡೆಯಲಿರುವ ಈ ಕ್ರಿಕೆಟ್ ಕೂಟಕ್ಕೆ ಎಂದಿನಂತೆ ಈ ಬಾರಿಯೂ ಕೂಡ ನಿಮ್ಮ ಸಹಕಾರ ಅತ್ಯಗತ್ಯ. ಸ್ಟಾರ್ ನಟರಿಗೆ, ಅವರ ಕ್ರಿಕೆಟ್ ಕೂಟಕ್ಕೆ ನೀಡುವ ಸಹಕಾರದಂತೆ, ಅವರ ಅಭಿಮಾನಿಗಳ ಕ್ರಿಕೆಟ್ ಪಂದ್ಯಾಟಕ್ಕೂ ನಿಮ್ಮ ಪ್ರೋತ್ಸಾಹ ಇರಲಿ ಎಂದು ಕೇಳಿಕೊಳ್ಳುತ್ತೇವೆ. ಇದೇ ಜನವರಿ 27 ಹಾಗು 28ರಂದು ನಡೆಯಲಿರುವ ಫ್ಯಾನ್ಸ್ ಕ್ರಿಕೆಟ್ ಲೀಗ್ – 11 ಬಗೆಗಿನ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.