ಬಿಡುಗಡೆಯಾಯಿತು “ಲಂಕೆ” ಚಿತ್ರದ ಸೂಫಿ ಶೈಲಿಯ ಹಾಡು.
ಲೂಸ್ ಮಾದ ಯೋಗೇಶ್ ನಾಯಕರಾಗಿ ನಟಿಸಿರುವ “ಲಂಕೆ” ಚಿತ್ರದ “ನಯನಕ್ಕೆ ನಯನ ಸೇರೋ ಕ್ಷಣ” ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿ, ಜನಪ್ರಿಯವಾಗುತ್ತಿದೆ.
ಚಿತ್ರದ ಹಾಡು ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಎಸ್ ಅರ್ ವಿ ಥಿಯೇಟರ್ ನಲ್ಲಿ ನಡೆಯಿತು.
ಈ ಹಾಡಿನ ಬಗ್ಗೆ ಮೊದಲು ಮಾತನಾಡಿದ ನಿರ್ದೇಶಕ ರಾಮಪ್ರಸಾದ್ ಎಂ.ಡಿ, ಸ್ವಲ್ಪ ದುಃಖ ಹಾಗೂ ಹೆಚ್ಚಿನ ಸಂತೋಷವನ್ನು ಹಾಡಿನ ಮೂಲಕ ಹೇಳಬೇಕೆಂದುಕೊಂಡೆ.
ಈ ವಿಷಯವನ್ನು ಗೀತರಚನೆಕಾರ ಗೌಸ್ ಫಿರ್ ಅವರ ಬಳಿ ಹೇಳಿದಾಗ “ನಯನಕ್ಕೆ ನಯನ ಸೇರೋ ಕ್ಷಣ” ಎಂಬ ಸುಂದರ ಗೀತೆ ಬರೆದುಕೊಟ್ಟರು. ಅಷ್ಟೇ ಮಧುರವಾಗಿ ಕಾರ್ತಿಕ್ ಶರ್ಮ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಧನಂಜಯ್ ಅವರ ನೃತ್ಯ ನಿರ್ದೇಶನದಲ್ಲಿ ಯೋಗಿ ಹಾಗೂ ಕೃಷಿ ತಾಪಂಡ ಅದ್ಭುತವಾಗಿ ನಟಿಸಿದ್ದಾರೆ ಎಂದು ತಿಳಿಸಿದ ರಾಮಪ್ರಸಾದ್ ವರಮಹಾಲಕ್ಷ್ಮೀ ಹಬ್ಬದಂದು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು.
ನಾಯಕ ಯೋಗೀಶ್ ಸಹ ಈ ಹಾಡಿನ ಬಗ್ಗೆ ಮೆಚ್ಚುಗೆ ಸೂಚಿಸಿ ಮಾತನಾಡಿದರು. ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮ ಹಾಗೂ ನೃತ್ಯ ನಿರ್ದೇಶಕರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ತುಂಬಾ ದಿನಗಳ ನಂತರ ಎಲ್ಲರನ್ನೂ ನೋಡಿ ಸಂತಸವಾಗುತ್ತಿದೆ ಎಂದು ಮಾತು ಆರಂಭಿಸಿದ, ನಾಯಕಿ ಕೃಷಿ ತಾಪಂಡ ಈ ಹಾಡು ಹಾಗೂ ಚಿತ್ರದ ಬಗ್ಗೆ ತಮ್ಮ ಅನುಭವದ ಮಾತುಗಳಾಡಿದರು.
ಚಿತ್ರದ ನಾಲ್ಕು ಹಾಡುಗಳು ಬೇರೆ ಬೇರೆ ಶೈಲಿಯಲ್ಲಿದೆ. ಈ ಹಾಡು ಸೂಫಿ ಹಾಗೂ ಕವಾಲಿ ಶೈಲಿಯಲ್ಲಿದೆ. ಗೌಸ್ ಫಿರ್ ಅವರ ಸಾಹಿತ್ಯ ಸೊಗಸಾಗಿದೆ ಹಾಗೂ ಈ ಹಾಡನ್ನು ಕನ್ನಡದವರೇ ಆದ ಧನುಷ್ ಜಗದೀಶ್ ಹಾಗೂ ರಕ್ಷಿತ ಸುರೇಶ್ ಹಾಡಿದ್ದಾರೆ ಎಂದು ಚಿತ್ರದ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಕಾರ್ತಿಕ ಶರ್ಮ ಮಾಹಿತಿ ನೀಡಿದರು.
ಗೀತರಚನೆಕಾರ ಗೌಸ್ ಫಿರ್ ಅವರು ತಾವು ಬರೆದಿರುವ ಈ ಹಾಡಿನ ಬಗ್ಗೆ ಮಾತನಾಡಿ, ಸಂಗೀತ ನಿರ್ದೇಶಕರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ನಿರ್ಮಾಪಕ ಪಟೇಲ್ ಶ್ರೀನಿವಾಸ್ ಹಾಗೂ ಸುರೇಖ ರಾಮ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ವಿಜಯ್ ಅವರ ಅಕಾಲಿಕ ಸಾವಿಗೆ ಇಡೀ ತಂಡ ಕಂಬನಿ ಮಿಡಿಯಿತು.