ಸಂತೋಷ್ ಶ್ರೀಕಂಠಪ್ಪ ನಿರ್ದೇಶನದಲ್ಲಿ ಮೂಡಿ ಬಂದ ‘ಖಾಸಗಿ ಪುಟಗಳು’ ಸಿನಿಮಾ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಟ್ರೇಲರ್, ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಚಿತ್ರಮಂದಿರದಲ್ಲಿ ಆ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡ ಈ ಸಿನಿಮಾ ಎರಡನೇ ವಾರಕ್ಕೆ ಕಾಲಿಡುತ್ತಿದೆ.
ನವೀರಾದ ಪ್ರೇಮಕಥೆಯುಳ್ಳ ‘ಖಾಸಗಿ ಪುಟಗಳು’ ಸಿನಿಮಾ ಕಟೆಂಟ್, ವಿಶ್ಯುವಲ್ಸ್, ಹಾಡುಗಳ ಜೊತೆಗೆ ಕಲಾವಿದರ ಅಭಿನಯದ ಮೂಲಕವೂ ಗಮನ ಸೆಳೆದಿದೆ. ಸಿನಿಮಾ ನೋಡಿದವರು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ಉತ್ತಮ ವಿಮರ್ಶೆ ಹೊತ್ತ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಹೊಸಬರ ಪ್ರಯತ್ನವನ್ನು ಇನ್ನಷ್ಟು ಜನರಿಗೆ ತಲುಪಿಸುತ್ತಿದ್ದಾರೆ.
ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ನಿರ್ದೇಶಕರಾದ ಜಯತೀರ್ಥ, ಬಿ.ಎಂ.ಗಿರಿರಾಜ್, ಗುರುದೇಶ್ ಪಾಂಡೆ, ಸುಜಯ್ ಶಾಸ್ತ್ರಿ, ಶಂಕರ್ ಗುರು ಸಿನಿಮಾ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ಅರ್ಚನಾ ಜೋಯಿಸ್, ಅರ್ಚನಾ ಕೊಟ್ಟಿಗೆ, ಶ್ರೀ ಮಹಾದೇವ್, ಚೈತ್ರಾ ಕೊಟ್ಟೂರ್, ಬ್ರೋ ಗೌಡ ಹೀಗೆ ಹಲವು ನಟ ನಟಿಯರು ಸಿನಿಮಾ ವೀಕ್ಷಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಕರಿಂದ ಮೆಚ್ಚುಗೆ, ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳಿಂದ ಸಾಥ್ ಹಾಗೂ ಪ್ರಶಂಸೆ ಪಡೆದುಕೊಂಡಿರುವ ಈ ಸಿನಿಮಾ ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರತಂಡ ಕೂಡ ಸಿನಿಮಾಗೆ ಸಿಗುತ್ತಿರುವ ಪ್ರೀತಿಗೆ ಸಂತಸಗೊಂಡಿದೆ. ಈ ಚಿತ್ರ ಸಂಪೂರ್ಣ ಹೊಸಬರ ಪ್ರಯತ್ನ. ಕಾಲೇಜು ಹುಡುಗನ್ನೊಬ್ಬನ ನವೀರಾದ ಪ್ರೇಮಕಥೆ ಹೊತ್ತ ಸಿನಿಮಾವಿದು. ಚಿತ್ರದಲ್ಲಿ ವಿಶ್ವ ನಾಯಕನಾಗಿ, ಶ್ವೇತಾ ಡಿಸೋಜ ನಾಯಕಿಯಾಗಿ ನಟಿಸಿದ್ದಾರೆ.
ಚೇತನ್ ದುರ್ಗಾ, ನಂದಕುಮಾರ್, ಶ್ರೀಧರ್, ನಿರೀಕ್ಷಾ ಶೆಟ್ಟಿ, ದಿನೇಶ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಎಸ್ ವಿ ಎಂ ಮೋಶನ್ ಪಿಕ್ಚರ್ ಬ್ಯಾನರ್ ನಡಿ ಮಂಜು ವಿ ರಾಜ್, ವೀಣಾ ವಿ ರಾಜ್, ಮಂಜುನಾಥ್ ಡಿ ಎಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ, ವಿಶ್ವಜಿತ್ ರಾವ್ ಛಾಯಾಗ್ರಹಣ,ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ, ಆಶಿಕ್ ಕುಸುಗೋಳಿ ಸಂಕಲನ ಚಿತ್ರಕ್ಕಿದೆ.