Kannada Beatz
News

ಜಾಕಿ 42’ನಲ್ಲಿ ‘ಸೆಲ್ಫಿ ಸರೋಜಾ’ ಸದ್ದು… ಶಿಲೆಯಾಗಿ ನಿಲ್ಲುವ ಹಂಬಲದಲ್ಲಿ ಕಿರಣ್ ರಾಜ್

ಗೋಲ್ಡನ್ ಗೇಟ್ ಸಂಸ್ಥೆ ನಿರ್ಮಾಣದ, ಗುರುತೇಜ್ ಶೆಟ್ಟಿ ನಿರ್ದೇಶನದ ‘ಜಾಕಿ 42’ ಚಿತ್ರದ ಮೂರನೇ ಹಾಡು ಬಿಡುಗಡೆ; ಡಿಸೆಂಬರ್ 18ಕ್ಕೆ ಸಿನಿಮಾ ತೆರೆಗೆ

ಕಿರಣ್ ರಾಜ್ ನಾಯಕನಾಗಿ ಅಭಿನಯಿಸಿರುವ, ಗುರುತೇಜ್ ಶೆಟ್ಟಿ ನಿರ್ದೇಶನದ ‘ಜಾಕಿ 42’ ಚಿತ್ರದ ಮೂರನೇ ಹಾಡು ‘ಸೆಲ್ಫಿ ಸರೋಜಾ’ ಇಂದು ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಮೂರನೇ ಹಾಡು ಕೂಡ ಗಮನ ಸೆಳೆಯುತ್ತಿದೆ. ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿರುವ ಈ ಹಾಡಿಗೆ ವಿನೋದ್ ಯಜಮಾನ್ಯ ಸಂಗೀತ ನೀಡಿದ್ದಾರೆ. ಕಿರಣ್ ರಾಜ್, ಮುಂಬೈ ಬೆಡಗಿ ಕೃತಿ ವರ್ಮ ಹಾಗೂ ಭೂಷಣ್ ಮಾಸ್ಟರ್ ಅವರ ನೃತ್ಯ ಹಾಡಿನ ವಿಶೇಷ ಆಕರ್ಷಣೆಯಾಗಿದೆ.

ಗೋಲ್ಡನ್ ಗೇಟ್ ಸಂಸ್ಥೆಯಡಿ ಸತ್ಯನಾರಾಯಣ್ ಮತ್ತು ಭಾರತಿ ಸತ್ಯನಾರಾಯಣ್ ನಿರ್ಮಿಸಿರುವ ಈ ಚಿತ್ರವನ್ನು ಜಯಣ್ಣ ಕಂಬೈನ್ಸ್ ವಿತರಣೆ ಮಾಡುತ್ತಿದೆ. ಡಿಸೆಂಬರ್ 18ರಂದು ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ.

ನಿರ್ದೇಶಕ ಗುರುತೇಜ್ ಶೆಟ್ಟಿ ಮಾತನಾಡಿ, ಸುಮಾರು 15 ವರ್ಷಗಳ ಹಿಂದೆ ರೇಸ್‌ಕೋರ್ಸ್ ಬಗ್ಗೆ ಮೂಡಿದ್ದ ಕುತೂಹಲವೇ ಈ ಚಿತ್ರದ ಕಥೆಗೆ ಪ್ರೇರಣೆಯಾಯಿತು. ಕಿರಣ್ ರಾಜ್ ಅವರೊಂದಿಗೆ ‘ರಾನಿ’ ಸಿನಿಮಾ ಮಾಡಿದ ಬಳಿಕ ವಿಭಿನ್ನ ಕಥೆಯ ಹುಡುಕಾಟದಲ್ಲಿದ್ದಾಗ ಕುದುರೆ ರೇಸ್ ಹಿನ್ನೆಲೆಯ ಕಥೆ ರೂಪುಗೊಂಡಿತು. ಆದರೆ ಇದು ಕೇವಲ ರೇಸ್ ಕುರಿತ ಚಿತ್ರವಲ್ಲ. ಪ್ರೀತಿ, ಕುಟುಂಬದ ಭಾವನೆಗಳು ಹಾಗೂ ಮನರಂಜನೆಯ ಅಂಶಗಳೂ ಇದರಲ್ಲಿವೆ. ನಿರ್ಮಾಪಕರು, ಕಲಾವಿದರು ಮತ್ತು ತಂತ್ರಜ್ಞರ ಸಹಕಾರದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದರು.

ನಾಯಕ ಕಿರಣ್ ರಾಜ್ ಮಾತನಾಡಿ, “ಸೆಲ್ಫಿ ಸರೋಜಾ’ ಹಾಡಿನಲ್ಲಿ ಆರಂಭದಲ್ಲಿ ನಾನೇ ಅಭಿನಯಿಸಬೇಕಿತ್ತು. ಆದರೆ ನನ್ನ ನೃತ್ಯ ಈ ಪಾತ್ರಕ್ಕೆ ಅಷ್ಟಾಗಿ ಹೊಂದಿಕೆಯಾಗುವುದಿಲ್ಲ ಎಂಬುದು ನಿರ್ದೇಶಕರ ಅಭಿಪ್ರಾಯವಾಗಿತ್ತು. ಹಾಗಾಗಿ ಭೂಷಣ್ ಮಾಸ್ಟರ್ ಅವರನ್ನು ಆಯ್ಕೆ ಮಾಡಲಾಯಿತು. ಕೃತಿ ವರ್ಮ ಅವರ ವೃತ್ತಿಪರತೆ ಮತ್ತು ಸಹಕಾರ ತುಂಬಾ ಚೆನ್ನಾಗಿತ್ತು.

ಕಳೆದ ಹತ್ತು ವರ್ಷಗಳಿಂದ ಮಾಧ್ಯಮ ಮಿತ್ರರು ನನಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಅದಕ್ಕೆ ನಾನು ಕೃತಜ್ಞ. ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಈಗ ಬೆಳ್ಳಿತೆರೆಯಲ್ಲೂ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಎಂಬ ಹಂಬಲವಿದೆ. ‘ಜಾಕಿ 42’ ನನ್ನ ಜೀವನದ ದೊಡ್ಡ ಪಣ.

ಕಲ್ಲಿಗೆ ಏಟು ಬಿದ್ದಾಗಲೇ ಅದು ಶಿಲೆಯಾಗುತ್ತದೆ. ಆದರೆ ನಿರಂತರ ಏಟು ಬಿದ್ದರೆ ಕಲ್ಲೂ ಮಣ್ಣಾಗುತ್ತದೆ. ಮಣ್ಣಾಗುವ ಮುನ್ನ ಜೀವನದಲ್ಲಿ ಒಮ್ಮೆಯಾದರೂ ಶಿಲೆಯಾಗಿ ನಿಲ್ಲಬೇಕು ಎಂಬ ಆಸೆ ನನ್ನದು. ನನ್ನ ಈ ಸಿನಿಮಾ ಪಯಣದಲ್ಲಿ ಗುರುತೇಜ್ ಶೆಟ್ಟಿ ಅವರು ಸ್ನೇಹಿತನಾಗಿ, ಮಾರ್ಗದರ್ಶಕರಾಗಿ ಹಾಗೂ ತಂದೆಯ ಸ್ಥಾನದಲ್ಲಿ ನಿಂತು ಬೆಂಬಲ ನೀಡಿದ್ದಾರೆ” ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ನಿರ್ಮಾಪಕರಾದ ಸತ್ಯನಾರಾಯಣ್ ಮತ್ತು ಭಾರತಿ ಸತ್ಯನಾರಾಯಣ್ ತಮ್ಮ ಅನಿಸಿಕೆ ಹಂಚಿಕೊಂಡು, ವಿಭಿನ್ನ ಕಥಾಹಂದರದ ಸಿನಿಮಾ ನಿರ್ಮಿಸಬೇಕೆಂಬ ಕನಸಿನಿಂದ ‘ಜಾಕಿ 42’ ಆರಂಭವಾಯಿತು. ಗುರುತೇಜ್ ಶೆಟ್ಟಿ ಅವರ ಕಥೆ ಇಷ್ಟವಾಗಿ ಹಲವು ಬಾರಿ ಚರ್ಚಿಸಿ ನಿರ್ಮಾಣಕ್ಕೆ ಮುಂದಾದೆವು. ಮೂರು ವರ್ಷಗಳ ಪಯಣದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಹಾಡುಗಳು, ಫೈಟ್, ಕುಟುಂಬದ ಭಾವನೆಗಳು ಹಾಗೂ ಕುದುರೆ ರೇಸ್ ಸೇರಿದಂತೆ ಸಂಪೂರ್ಣ ಮನರಂಜನೆಯ ಅಂಶಗಳು ಚಿತ್ರದಲ್ಲಿವೆ. ಕನ್ನಡ ಪ್ರೇಕ್ಷಕರು ನಮ್ಮ ಪ್ರಯತ್ನವನ್ನು ಮೆಚ್ಚಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.

ನಾಯಕಿ ಹೃತಿಕಾ ಶ್ರೀನಿವಾಸ್ ತಮ್ಮ ಅನುಭವ ಹಂಚಿಕೊಂಡು, ವಿಭಿನ್ನ ಕಥೆ ಹಾಗೂ ಭಾವನಾತ್ಮಕ ಪಾತ್ರ ಹೊಂದಿರುವ ‘ಜಾಕಿ 42’ ತಮ್ಮ ಪಾಲಿಗೆ ವಿಶೇಷ ಸಿನಿಮಾ. ಕಿರಣ್ ರಾಜ್ ಅವರೊಂದಿಗೆ ಅಭಿನಯಿಸಿದ್ದು ಸಂತೋಷ ತಂದಿದೆ. ಕುದುರೆ ರೇಸ್‌ನಲ್ಲಿ ಆಸಕ್ತಿ ಹೊಂದಿದ್ದ ತಮ್ಮ ಅಜ್ಜನ ನೆನಪುಗಳೂ ಈ ಚಿತ್ರದ ಕಥೆಯೊಂದಿಗೆ ಬೆಸೆದುಕೊಂಡಿವೆ ಎಂದು ಹೇಳಿದರು.

ಕೃತಿ ವರ್ಮ ‘ಸೆಲ್ಫಿ ಸರೋಜಾ’ ಹಾಡು ಅದ್ಭುತವಾಗಿ ಮೂಡಿಬಂದಿದ್ದು, ಭೂಷಣ್ ಮಾಸ್ಟರ್ ಅವರ ಕೊರಿಯೋಗ್ರಫಿ ವಿಶೇಷವಾಗಿದೆ. ಅವರೊಂದಿಗೆ ಕೆಲಸ ಮಾಡಿದ್ದು ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭೂಷಣ್ ಮಾಸ್ಟರ್ ಕೊನೆಯ ಕ್ಷಣದಲ್ಲಿ ಹಾಡಿನಲ್ಲಿ ಅಭಿನಯಿಸುವ ಅವಕಾಶ ಒದಗಿಬಂದಿದ್ದನ್ನು ನೆನಪಿಸಿಕೊಂಡು, ಕೃತಿ ವರ್ಮ ಎರಡು ದಿನ ಮುಂಚಿತವಾಗಿ ಬಂದು ಪೂರ್ವಾಭ್ಯಾಸ ನಡೆಸಿದ್ದರು. ಕೇವಲ ಎರಡು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು, ನಿರ್ಮಾಪಕರ ಸಹಕಾರದಿಂದ ಹಾಡು ಉತ್ತಮವಾಗಿ ಮೂಡಿಬಂದಿದೆ ಎಂದು ತಿಳಿಸಿದರು.

ಚಿತ್ರವನ್ನು ಅರ್ಪಿಸುತ್ತಿರುವ ಪ್ರವೀಣ್ ಏಕಾಂತ ಅವರು ಚಿತ್ರದ ವಿಭಿನ್ನ ಕಥಾಹಂದರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕನ್ನಡ ಪ್ರೇಕ್ಷಕರು ಈ ಪ್ರಯತ್ನವನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು. ಛಾಯಾಗ್ರಾಹಕ ರಾಘವೇಂದ್ರ ಬಿ. ಕೋಲಾರ, ಹಿರಿಯ ನಟ ರಾಜೇಂದ್ರ ಕಾರಂತ್ ಸೇರಿದಂತೆ ಚಿತ್ರತಂಡದ ಇತರ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Related posts

“ಶ್ಯಾನುಭೋಗರ ಮಗಳಾಗಿ” ರಾಗಿಣಿ ಪ್ರಜ್ವಲ್.

Kannada Beatz

Kannada Beatz

ಬಹುಮುಖ ಪ್ರತಿಭೆ ವೈದ್ಯ , ನಟ, ಲೇಖಕ ಡಾ. ಲೀಲಾ ಮೋಹನ್ ಪಿ.ವಿ.ಆರ್

Kannada Beatz

Leave a Comment

Share via
Copy link