ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ತೊಡಗಿಕೊಂಡವರಿಗೆ ಹಾಗೂ ಸಿನಿಮಾಸಕ್ತರಿಗಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಏರ್ಪಡಿಸಿದ್ದ 3 ದಿನಗಳ ‘ಸಿನಿ ಸಂವಾದ’ ಕಾರ್ಯಕ್ರಮದ ಕೊನೆಯ ದಿನದ ಕೊನೆಯ ಗೋಷ್ಠಿಯಾಗಿ ಸಿನಿಮಾ ಪ್ರಚಾರಕರ್ತರು ಹಾಗೂ ಪ್ರಚಾರ ವಿನ್ಯಾಸಕರು ತಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಿದರು. ಚಿತ್ರರಂಗದಲ್ಲಿ ಪ್ರಚಾರಕರ್ತರ ಪಾತ್ರ, ಸಿನಿಮಾ ಪ್ರಚಾರದ ಮಹತ್ವದ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಇಡೀ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ಪತ್ರಕರ್ತ ಚಿದಾನಂದ ಪಟೇಲ್ ಅವರು ನಿರ್ವಹಿಸಿದರು.
ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಮಾತನಾಡುತ್ತಾ, ‘ಒಂದು ಸಿನಿಮಾಗೆ ನಾಯಕ ಎಷ್ಟು ಮುಖ್ಯವೋ ಪಿಆರ್ಓ ಕೂಡ ಅಷ್ಟೇ ಮುಖ್ಯ. ನಾವು ಮಾಧ್ಯಮ ಹಾಗೂ ಚಿತ್ರರಂಗಕ್ಕೆ ಕೊಂಡಿಯಂತೆ ಕೆಲಸ ಮಾಡುತ್ತೇವೆ. ನಮಗೆ ತುಂಬಾ ದೊಡ್ಡ ಜವಾಬ್ದಾರಿ ಇರುತ್ತದೆ. ಹಿಂದಿನ ಕಾಲದಲ್ಲಿ ಸಿನಿಮಾ ಪ್ರಚಾರ ಈಗಿನಂತಿರಲಿಲ್ಲ. ಆರಂಭದಲ್ಲಿ ಸಿನಿಮಾ ಪ್ರಚಾರಕ್ಕೆ ಅಂತ ವಿಭಾಗ ಇರಲಿಲ್ಲ, ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಪತ್ರಕರ್ತರೇ ಭೇಟಿ ನೀಡಿ ವರದಿ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಪ್ರಚಾರಕರ್ತ ಎಂಬ ಹುದ್ದೆಯನ್ನು ಹುಟ್ಟು ಹಾಕಿದ್ದೇ ನಮ್ಮ ಚಿಕ್ಕಪ್ಪ ಡಿ.ವಿ.ಸುಧೀಂದ್ರ ಅವರು. ಸಿನಿಮಾದ ಸುದ್ದಿ ಬರೆದುಕೊಂಡು ಫೋಟೋ ಜತೆಗೆ ಅದನ್ನು ಎಲ್ಲಾ ಪತ್ರಿಕಾ ಕಛೇರಿಗಳಿಗೆ ಖುದ್ದಾಗಿ ಹೋಗಿ ಕೊಡುತ್ತಿದ್ದರು. ಸಿನಿಮಾರಂಗ ಬೆಳೆದಂತೆ ಪಿ.ಆರ್.ಓ. ವೃತ್ತಿಗೆ ಸಾಕಷ್ಟು ಮಹತ್ವ ಬಂತು’ ಎಂದು ಶಿಬಿರಾರ್ಥಿಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
ಇಂದಿನ ಸಿನಿಮಾರಂಗದ ಬೆಳವಣಿಗೆಗಳ ಬಗ್ಗೆ ಅವರಿಗೆ ಕೊಂಚ ವಿಷಾದವೂ ಇದೆ. ಈ ಕುರಿತು ಪ್ರಸ್ತಾಪಿಸುತ್ತಾ, ‘ಈಗೆಲ್ಲ ನಿರ್ಮಾಪಕರು ತಮ್ಮ ಸಿನಿಮಾ ಪೂರ್ತಿ ಮುಗಿಸಿಕೊಂಡು ನಂತರ ನಮ್ಮ ಬಳಿ ಬರುತ್ತಾರೆ. ಅದು ಪದ್ಧತಿ ಅಲ್ಲ, ಒಂದು ಸಿನಿಮಾ ಮುಹೂರ್ತದಿಂದ ಹಿಡಿದು ರಿಲೀಸ್ವರೆಗೂ ಪ್ರಚಾರದಲ್ಲಿರಬೇಕು. ಆಗೆಲ್ಲ ಕಂಪ್ಯೂಟರ್ ಗ್ರಾಫಿಕ್ಸ್, ಎಐ ಅಂತ ಯಾವುದೂ ಇರಲಿಲ್ಲ, ಪೋಸ್ಟರ್ʼಗಳನ್ನು ವಿನ್ಯಾಸಕರು ಕೈಲೇ ಡಿಸೈನ್ ಮಾಡುತ್ತಿದ್ದರು. ಪೋಸ್ಟರ್ ನೋಡಿದ ಕೂಡಲೇ ಇದು ಕಾಮಿಡಿ, ಭಕ್ತಿಪ್ರದಾನ ಸಿನಿಮಾ ಅಂತ ಗೊತ್ತಾಗಿ ಬಿಡುತ್ತಿತ್ತು. ಅಂಥಾ ಪ್ರತಿಭಾವಂತ ವಿನ್ಯಾಸಕರೂ ಆಗ ಇದ್ದರು’ ಎಂದು ಹೇಳಿದರು.
ಸಿನಿಮಾ ಪ್ರಚಾರಕರ್ತ ಪ್ರವೀಣ್ ಏಕಾಂತ್ ಮಾತನಾಡುತ್ತಾ, ‘ಸಿನಿಮಾಗೆ ಪ್ರಚಾರ ಎನ್ನುವುದು ಪ್ರಮುಖವಾದ ಭಾಗ. ರಾಮಾಯಣದ ಕಥೆ ಎಲ್ಲರಿಗೂ ಗೊತ್ತು. ಈ ಕತೆ ತೆರೆಯ ಮೇಲೆ ಹಲವು ಬಾರಿ ಬಂದಿದೆ. ಆದರೂ ಜನ ಈಗಲೂ ನೋಡುತ್ತಿದ್ದಾರೆ. ಪ್ರೇಕ್ಷಕರಿಗೆ ನಿಮ್ಮ ಸಿನಿಮಾದ ಕಂಟೆಂಟ್ ಏನು ಅನ್ನುವುದು ಗೊತ್ತಾಗಬೇಕು. ಕಂಟೆಂಟ್ ಈಸ್ ಕಿಂಗ್, ರೀಲ್ಸ್ ಮಾಡಿದರೆ ಸಿನಿಮಾ ಗೆಲ್ಲಲ್ಲ. ಜನ ಹಣ ಕೊಟ್ಟು ಥಿಯೇಟರ್ಗೆ ಬರಬೇಕೆಂದರೆ ಅದು ಆತನನ್ನು ಸೆಳೆಯಬೇಕು’ ಎಂದು ಶಿಬಿರಾರ್ಥಿಗಳಿಗೆ ಅರ್ಥವಾಗುವ ಹಾಗೆ ಸರಳವಾಗಿ ವಿವರಿಸಿದರು. ಗೋಷ್ಠಿಯ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರೂ ಆದ ವಿನ್ಯಾಸಕ ವಿಷ್ಣು ಅವರು ಪೋಸ್ಟರ್ ಡಿಸೈನ್ ಹೇಗಿರಬೇಕು, ಯಾವರೀತಿ ಇದ್ದರೆ ಅದು ಜನರನ್ನು ಆಕರ್ಷಿಸುತ್ತದೆ ಎನ್ನುವ ಬಗ್ಗೆ ಶಿಬಿರಾರ್ಥಿಗಳಿಗೆ ವಿವರಣೆ ನೀಡಿದರು. ಪತ್ರಕರ್ತ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರೂ ಆದ ಚಿದಾನಂದ ಪಟೇಲ್ ಅವರು ಗೋಷ್ಠಿ ನಿರ್ವಹಿಸಿದರು.

