ನಿರ್ಮಾಪಕರಿಗೆ ಮತ್ತೊಂದು ಸಿನಿಮಾ ಆರಂಭಿಸುವ ಉತ್ಸಾಹ.
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಜನರನ್ನು ತಮ್ಮ ಪಾತ್ರದ ಮೂಲಕ ನಕ್ಕುನಗಿಸುವ ತರಂಗ ವಿಶ್ವ ನಿರ್ಮಿಸಿರುವ, ವೀರೇಶ್ ಪಿ.ಎಂ ನಿರ್ದೇಶಿಸಿರುವ “ಗಿರ್ಕಿ” ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರ್ಮಾಣದಲ್ಲಿ ವಿಶ್ವ ಅವರಿಗೆ ವಾಸುಕಿ ಭುವನ್ ಸಾಥ್ ನೀಡಿದ್ದಾರೆ.
ಈ ಸಂತಸವನ್ನು ಚಿತ್ರತಂಡ ಮಾಧ್ಯಮದವರ ಮುಂದೆ ಹಂಚಿಕೊಂಡರು.
ನಟನಾಗಿದ್ದ ನಾನು, ಈ ಚಿತ್ರದಿಂದ ನಿರ್ಮಾಪಕನಾದೆ. ನಟನೆ ಕೂಡ ಮಾಡಿದ್ದೇನೆ. ಕಳೆದವಾರ ಚಿತ್ರ ತೆರೆ ಕಂಡಿದೆ. ನಮ್ಮ ಚಿತ್ರಕ್ಕೆ ರಾಜ್ಯಾದ್ಯಂತ ಸಿಗುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ. ಕನಕಪುರ ಸೇರಿ ಹಲವು ಕಡೆ ಭೇಟಿ ನೀಡಿದ್ದೇನೆ. ಜನ ಸಿನಿಮಾ ಬಗ್ಗೆ ಉತ್ತಮ ಮಾತುಗಳಾಡುತ್ತಿದ್ದಾರೆ. ಚಿತ್ರದ ಹಿಂದಿ ರೈಟ್ಸ್ ಕೂಡ ಮಾರಾಟವಾಗುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ನಾನು ಮತ್ತೊಂದು ಚಿತ್ರ ಸಹ ಆರಂಭಿಸಲಿದ್ದೇನೆ. ಚಿತ್ರದ ಗೆಲುವಿಗೆ ಕಾರಣರಾದ ನನ್ನ ಚಿತ್ರತಂಡಕ್ಕೆ ಹಾಗೂ ಕನ್ನಡ ಕಲಾರಸಿಕರಿಗೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಹಾಗೂ ನಟ ತರಂಗ ವಿಶ್ವ.
ನಾನು ಅಸೋಸಿಯೇಟ್ ಆಗಿದ್ದಾಗ ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದೆ. ಆಗ ಅಲ್ಲಿ ಜನರು ಆ ನಿರ್ದೇಶಕನ ಬಗ್ಗೆ ಆಡುತ್ತಿದ್ದ ಪ್ರಶಂಸೆಯ ಮಾತುಗಳನ್ನು ಕೇಳಿ ನನಗೂ ನಿರ್ದೇಶಕನಾಗುವ ಅಸೆ ಹೆಚ್ಚುತ್ತಿತ್ತು. ಈಗ ನಾನು ಆ ಸಂತೋಷವನ್ನು ಅನುಭವಿಸುತ್ತಿದ್ದೇನೆ. ನಮ್ಮ ಚಿತ್ರಕ್ಕೆ ಹೋದ ಕಡೆ ಎಲ್ಲಾ ಉತ್ತಮ ಪ್ರಶಂಸೆ ಸಿಗುತ್ತಿದೆ. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನನ್ನ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ವೀರೇಶ್ ಪಿ.ಎಂ.
ತಮ್ಮ ಚಿತ್ರಕ್ಕೆ ಸಿಗುತ್ತಿರುವ ಯಶಸ್ಸಿನ ಬಗ್ಗೆ ನಟ ವಿಲೋಕ್ ರಾಜ್, ಆನಂದಭರಿತ ಮಾತುಗಳನ್ನಾಡುವ ಮೂಲಕ ಸಂಭ್ರಮಿಸಿದರು.
ಯಶಸ್ಸನ್ನು ಸಂಭ್ರಿಮಿಸುವುದು ಒಬ್ಬೊಬ್ಬರು ಬೇರೆ ಬೇರೆ ರೀತಿ. ನಾನು ಥಿಯೇಟರ್ ಗೆ ಹೋದಾಗ ಜನ ಸಿಳ್ಳೆ ಹೊಡೆಯುತ್ತಾರಲ್ಲಾ? ಎದುರಿಗೆ ಸಿಕ್ಕಾಗ ಆ ಪಾತ್ರ ಮಾಡಿರುವುದು ನೀವೇ ಅಲ್ಲವಾ? ಅಂತಾರಲ್ಲ. ಅದೇ ನನಗೆ ನಿಜವಾದ ಯಶಸ್ಸು ಎಂದರು ದಿವ್ಯ ಉರುಡಗ.
ಪರಿಮಳ ಎಂಬ ಪಾತ್ರದ ಹೆಸರಿನ ಮೂಲಕ ನನ್ನ ಹೋದ ಕಡೆ ಗುರುತಿಸುತ್ತಿದ್ದಾರೆ. ಸಂತೋಷವಾಗಿದೆ ಎಂದರು ರಾಶಿ ಮಹದೇವ್.
ಸಂಗೀತ ನಿರ್ದೇಶಕ ವೀರಸಮರ್ಥ್, ವಿತರಕ ರಾಜು ಮುಂತಾದವರು “ಗಿರ್ಕಿ” ಬಗ್ಗೆ ಮಾತನಾಡಿದರು.