ಚಿತ್ರದ ಮೊದಲ ಸನ್ನಿವೇಶಕ್ಕೆ ಭಾರತಿ ವಿಷ್ಣುವರ್ಧನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಚಾಲನೆ .
ನಟ ಅನಿರುದ್ಧ್ ನಾಯಕರಾಗಿ ನಟಿಸುತ್ತಿರುವ, ಎಂ.ಆನಂದರಾಜ್ ನಿರ್ದೇಶನದ “ಶೆಫ್ ಚಿದಂಬರ” ಚಿತ್ರದ ಮುಹೂರ್ತ ಸಮಾರಂಭ ಹನುಮಂತನಗರದ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆರಂಭ ಫಲಕ ತೋರಿದರು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕ್ಯಾಮೆರಾ ಚಾಲನೆ ಮಾಡಿದರು.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಆನಂದರಾಜ್, ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಚಿತ್ರ. ಅನಿರುದ್ಧ್ ಅವರು ಐದು ವರ್ಷಗಳ ನಂತರ ನಟಿಸುತ್ತಿರುವ ಚಿತ್ರವಿದು. ಇಂದಿನಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಆರಂಭವಾಗಲಿದೆ. ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ನಟಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ರಘು ರಮಣಕೊಪ್ಪ, ಶಿವಮಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ರೂಪ ಡಿ.ಎನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಉದಯ್ ಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಬಿ.ಆರ್ ನವೀನ್ ಕುಮಾರ್ ಸೌಂಡ್ ಡಿಸೈನ್ ಹಾಗೂ ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ ಎಂದು ವಿವರಣೆ ನೀಡಿದರು.
ನಿರ್ದೇಶಕರು ಹೇಳಿದ ಹಾಗೆ ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಚಿತ್ರ. ಕಾಮಿಡಿಯೊಂದಿಗೆ ಕೌತುಕವು ಇದೆ. ಒಂದು ಕೊಲೆಯ ಸುತ್ತ ಕಥೆ ನಡೆಯುತ್ತದೆ. ನಾನು ಶಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ . ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಕಳೆದ ತಿಂಗಳು ಮೈಸೂರಿನ ಡಾ||ವಿಷ್ಣುವರ್ಧನ್ ಸಮಾಧಿ ಬಳಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿತ್ತು. ಅಂದು ಕೂಡ ಭಾರತಿ ಅಮ್ಮ ಅವರು ಆಗಮಿಸಿದ್ದರು. ಚಿತ್ರದ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ನಿಮ್ಮ ಜೊತೆ ನಾನು ಇದ್ದೀನಿ ಎಂದು ಭರವಸೆ ನೀಡಿದರು. ಮುಹೂರ್ತ ಸಮಾರಂಭಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರು ಆಗಮಿಸಿ ಶುಭ ಕೋರಿದರು. ಎಲ್ಲರಿಗೂ ನನ್ನ ಧನ್ಯವಾದ. ನಿರ್ಮಾಪಕಿ ರೂಪ ಅವರ ಪತಿ ಸರ್ವೋತ್ತಮ ಅವರು ನನ್ನ ಸ್ನೇಹಿತರು. ಅವರಿಗೆ ಕಥೆ ಇಷ್ಟವಾಗಿ , ನಿರ್ಮಾಣ ಮಾಡುತ್ತಿದ್ದಾರೆ ಎಂದು ನಟ ಅನಿರುದ್ಧ್ ತಿಳಿಸಿದರು.
ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ರೂಪ.
ನಾಯಕಿಯರಾದ ನಿಧಿ ಸುಬ್ಬಯ್ಯ, ರೆಚೆಲ್ ಡೇವಿಡ್, ನಟ ರಘು ರಮಣ ಕೊಪ್ಪ ಹಾಗೂ ಛಾಯಾಗ್ರಹಕ ಉದಯ್ ಲೀಲ ಚಿತ್ರದ ಕುರಿತು ಮಾತನಾಡಿದರು.
ಈ ಸ್ಥಳಕ್ಕೆ ಬಂದಾಗ ನಮ್ಮ ಯಜಮಾನರ “ಯಜಮಾನ” ಚಿತ್ರದ ಮುಹೂರ್ತ ಸಮಾರಂಭ ನೆನಪಾಯಿತು. ಆ ಚಿತ್ರದ ಮುಹೂರ್ತ ಕೂಡ ಇಲ್ಲೇ ನಡೆದಿತ್ತು. ಈ ಚಿತ್ರಕ್ಕೂ ಒಳ್ಳೆಯದಾಗಲಿ ಎಂದು ಭಾರತಿ ವಿಷ್ಣುವರ್ಧನ್ ಹಾರೈಸಿದರು.
ಚಿತ್ರದ ಕ್ಯಾರೆಕ್ಟರ್ ಟೀಸರ್ ಉಪೇಂದ್ರ ಬಿಡುಗಡೆ ಮಾಡಿದರು. ಅನಿರುದ್ದ್ ಅವರ ಪತ್ನಿ ಕೀರ್ತಿ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.