ಒಂದು ಅಪಘಾತ ಅದರ ಬೆನ್ನಲ್ಲೇ ಮತ್ತೊಂದು ಕೊಲೆ, ಅದರ ಸುತ್ತ ಸುತ್ತಿಕೊಳ್ಳುವ ಮೆಡಿಕಲ್ ಮಾಫಿಯಾ… ಇವೆಲ್ಲವನ್ನೂ ಬೆನ್ನಟ್ಟುವ ಕಥೆಯೇ “ಚೇಸ್”!!
ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಹೊಸ ನಿರ್ದೇಶಕ ವಿಲೋಕ್ ಶೆಟ್ಟಿ ಅವರು ಚಿತ್ರದುದ್ದಕ್ಕೂ ಎಲ್ಲೂ ಸಸ್ಪೆನ್ಸ್ ಲೀಕ್ ಆಗದಂತೆ ನೋಡಿಕೊಂಡಿದ್ದು ಒಂಚೂರೂ ಬೋರ್ ಹೊಡೆಸದಂತೆ ಕಥೆಯ ಜೊತೆಯಲ್ಲೇ ಪ್ರೇಕ್ಷಕನ ಮೆದುಳನ್ನೂ ಚೇಸ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರವಿರುವ ಚಿತ್ರಕ್ಕೆ ಪಾತ್ರಗಳೇ ಜೀವಾಳ, ಹೀಗಾಗಿ ವಿಲೋಕ್ ಶೆಟ್ಟಿ ಪ್ರತಿಯೊಂದು ಪಾತ್ರವನ್ನು ಕೂಡಾ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ ನಾಯಕ ನಟ ಅವಿನಾಶ್ ನರಸಿಂಹರಾಜು ಸಿಸಿಬಿ ಅಧಿಕಾರಿಯಾಗಿ ಎಂದಿನಂತೆ ತಮ್ಮ ಡಿಫರೆಂಟ್ ಮ್ಯಾನರಿಸಂನಲ್ಲಿ ಇಷ್ಟವಾದ್ರೆ ಚಿತ್ರದ ಮುಖ್ಯ ಪಾತ್ರದಲ್ಲಿ ರಾಧಿಕಾ ನಾರಾಯಣ್ ನಟನೆಗೆ ಫುಲ್ ಮಾರ್ಕ್ಸ್ ನೀಡಲೇಬೇಕು.
ರಂಗಿತರಂಗ ಬಳಿಕ ರಾಧಿಕಾಗೆ ಸಿಕ್ಕ ಚಾಲೆಂಜಿಂಗ್ ಪಾತ್ರವಿದು. ಇವರ ಜೊತೆಯಲ್ಲಿ ಮ್ಯಾಕ್ಸ್ ಹೆಸರಿನ ನಾಯಿ ನಟನೆ ಸೂಪರ್. ಶೀತಲ್ ಶೆಟ್ಟಿ, ಅರ್ಜುನ್ ಯೋಗಿ ನಟನೆ ಪ್ರೇಕ್ಷಕನ ಮನ ಗೆಲ್ಲುತ್ತೆ. ಕಿರುತೆರೆ ಪ್ರೇಕ್ಷಕರಿಗೆ ಆತ್ಮೀಯರಾಗಿರುವ ರಾಜೇಶ್ ನಟರಂಗ ಇಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಎಬಿಸಿಡಿ ಖ್ಯಾತಿಯ ಸುಶಾಂತ್ ಪೂಜಾರಿ ಸಣ್ಣ ಪಾತ್ರವಾದರೂ ಜನ ಗುರುತಿಸುತ್ತಾರೆ. ಅರವಿಂದ್ ರಾವ್ ತಮ್ಮ ರಫ್ ಆಂಡ್ ಟಫ್ ಕ್ಯಾರೆಕ್ಟರ್ ಗೆ ಜೀವ ತುಂಬಿದ್ದಾರೆ. ಇನ್ನು ತುಳು ಚಿತ್ರಪ್ರೇಮಿಗಳ ಮೆಚ್ಚಿನ ಅರವಿಂದ್ ಬೋಳಾರ್ ಅವರು ಚಿತ್ರದ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಥಿಯೇಟರ್ ನಲ್ಲಿ ನಗೆ ಬಾಂಬ್ ಸಿಡಿಸುತ್ತಾರೆ.
ಉಳಿದಂತೆ ಪ್ರಮೋದ್ ಶೆಟ್ಟಿ ತಮ್ಮ ಖಳಛಾಯೆಯ ಖದರ್ ಉಳಿಸಿಕೊಂಡರೆ, ಶ್ವೇತಾ ಸಂಜೀವುಲು, ವೀಣಾ, ಸುಂದರ್, ರೆಹಮಾನ್, ಸುಧಾ ಬೆಳವಾಡಿ ಮತ್ತಿತರ ಪಾತ್ರಗಳು ಚಿತ್ರದಲ್ಲಿ ಕಥೆಯಾಗುತ್ತಾರೆ.
ಚೇಸ್ ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್ ಅದರ ಸಂಗೀತ ಮತ್ತು ಎರಡು ನವಿರಾದ ಪ್ರೇಮಗೀತೆಗಳು. ಕಾರ್ತಿಕ್ ಆಚಾರ್ಯ ಸಂಗೀತದಲ್ಲಿ ಮೂಡಿಬಂದಿರುವ ಡಾ. ಉಮೇಶ್ ಪಿಲಿಕುಡೇಲು ಸಾಹಿತ್ಯದ “ಮನದ ಹೊಸಿಲ…” ಹಾಡು ವಿಜಯ್ ಪ್ರಕಾಶ್, ಮಕ್ ಬುಲ್ ಮನ್ಸೂರ್ ಕಂಠದಲ್ಲಿ ವಾವ್ ಅನಿಸುವಷ್ಟು ಸೊಗಸಾಗಿದ್ದರೆ, ಸಂಜಿತ್ ಹೆಗ್ಡೆ ಹಾಡಿರೋ “ನಿಜಾನಾ ಏನಿದು…” ಹಾಡು ಸಿನಿಮಾ ಮುಗಿದ ಬಳಿಕವೂ ಗುನುಗುನಿಸುವಂತೆ ಮಾಡುತ್ತೆ.
ಚೇಸ್ ಚಿತ್ರಕ್ಕೆ ಮನೋಹರ್ ಸುವರ್ಣ, ಪ್ರಶಾಂತ್ ಶೆಟ್ಟಿ, ಪ್ರದೀಪ್ ಶೆಟ್ಟಿ ಬಂಡವಾಳ ಹಾಕಿದ್ದು ತಾಂತ್ರಿಕವಾಗಿ ಚಿತ್ರ ರಿಚ್ ನೆಸ್ ಆಗಿದೆ. ಎರಡು ಗಂಟೆ ಇಪ್ಪತ್ತು ನಿಮಿಷಗಳ ಕಾಲ ಪ್ರೇಕ್ಷಕನನ್ನು ಹಿಡಿದಿಟ್ಟು ಕೂರಿಸುವ ಚೇಸ್ ಚಿತ್ರದ ಕ್ಲೈಮಾಕ್ಸ್ ಸ್ವಲ್ಪ ದೀರ್ಘ ಆಯ್ತು ಅನಿಸೋದು ಬಿಟ್ರೆ ಯಾವ ದೃಶ್ಯವನ್ನೂ ನಿರ್ದೇಶಕರು ಅನವಶ್ಯಕವಾಗಿ ತುರುಕದೆ ಜಾಣ್ಮೆ ಮೆರೆದಿದ್ದಾರೆ. ಸಸ್ಪೆನ್ಸ್, ಲವ್, ಕ್ರೈಮ್, ಥ್ರಿಲ್ಲರ್, ಮ್ಯೂಸಿಕಲ್, ಕಾಮೆಡಿ ಎಲ್ಲದರ ಪ್ಯಾಕೇಜ್ ಆಗಿರೋ ಒಂದೊಳ್ಳೆ ಸಿನಿಮಾ ಚೇಸ್ ನಿಮ್ಮ ಈ ವಾರಾಂತ್ಯಕ್ಕೆ ಬೆಸ್ಟ್ ಎಂಟರ್ ಟೈನರ್ ಆಗಲಿದೆ ಒಮ್ಮೆ ನೋಡಿಬನ್ನಿ…!