ಒನ್ ಲವ್ ಟೂ ಸ್ಟೋರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವಸಿಷ್ಠ ಬಂಟನೂರು ಸಾರಥ್ಯದಲ್ಲಿ ತಯಾರಾಗಿರುವ 1975 ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಕ್ರೈಮ್ ಥ್ರಿಲ್ಲರ್ ಕಂಥಾಹಂದರವಿರುವ ಈ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್, ಜಯ್ ಶೆಟ್ಟಿ, ಮಾನಸ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಪ್ರತಿಭಾನ್ವಿತ ಬಳಗವಿದೆ. ಆರಂಭದಿಂದಲೂ ನಿರೀಕ್ಷೆಯಲ್ಲಿ ಹೆಚ್ಚಿಸಿರುವ 1975 ಸಿನಿಮಾದ ಶುರುವಾಗಿದೆ ಎಂಬ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆಷ್ಟೇ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಜರುಗಿತು.
ವಸಿಷ್ಠ ಬಂಟನೂರು ಮಾತನಾಡಿ, 1975 ಇದು ನನ್ನ ಎರಡನೇ ಕನಸು. ನನ್ನ ಕನಸು ನನಸು ಮಾಡಲು ಕೈ ಜೋಡಿಸಿದ ನನ್ನ ತಂಡದವರು, ನಿರ್ಮಾಪಕರೂ ಎಲ್ಲರಿಗೂ ಧನ್ಯವಾದ. ಇದೊಂದು ಥ್ರಿಲ್ಲರ್ ಬೇಸ್ ಸಿನಿಮಾ. ಎರಡು ಗಂಟೆ ನಿಮಗೆ ಹೇಗೆ ಹೋಗುತ್ತದೆ ಅನ್ನೋದು ಗೊತ್ತೇ ಆಗುವುದಿಲ್ಲ ಎಂದು ತಿಳಿಸಿದರು,
ಚಕ್ರವರ್ತಿ ಚಂದ್ರಚೂಡ್ ಮಾತನಾಡಿ, ಒಂದೊಳ್ಳೆ ಟೀಂ ಸೇರಿಕೊಂಡು ಸಿನಿಮಾ ಮಾಡಿದ್ದೇವೆ. ಕ್ರೈಂ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ನಿರ್ಮಾಪಕರು ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲೀಗ ತೂಕದ ಸಿನಿಮಾಗಳು ಬರ್ತಿವೆ. ನಿರ್ದೇಶಕರು ಕನಸು ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ. ಪ್ರತಿಯೊಬ್ಬರೂ ಸಿನಿಮಾಗೆ ಬೆಂಬಲ ನೀಡಿ ಎಂದರು.
ಶಿವಪ್ರಸಾದ್ ಸಾಹಿತ್ಯವಿರುವ ಶುರುವಾಗಿದೆ ಎಂಬ ಲವ್ ಟ್ರ್ಯಾಕ್ ಗೆ ಪವನ್ ಆರ್ ಕೊಟೈನ್ ಧ್ವನಿಯಾಗಿದ್ದು, ಸಂದೇಶ್ ಬಾಬಣ್ಣ, ಧನಂಜಯ್ ವರ್ಮಾ, ಶಿವಪ್ರಸಾದ್ ಸಂಗೀತದ ಇಂಪು ಹಾಡಿಗಿದೆ. ಪ್ರೊಡಕ್ಷನ್ ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ದಿನೇಶ್ ರಾಜನ್ ಸಿನಿಮಾಗೆ ಬಂಡವಾಳ ಹೂಡಿದ್ದು, ಬೆಂಗಳೂರು, ಉಡುಪಿ ಸೇರಿದಂತೆ ಚಿತ್ರೀಕರಣ ನಡೆದಿದೆ. ಈಗಾಗ್ಲೇ ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ಬ್ಯುಸಿಯಾಗಿದೆ.