ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಸಡಗರ ರಾಘವೇಂದ್ರ ನಿರ್ದೇಶನದ ಆಪರೇಷನ್ ಲಂಡನ್ ಕೆಫೆ ಚಿತ್ರ ತಂಡ ಕೊನೆಯ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಅದಕ್ಕೂ ಮೊದಲು ಮರಾಠಿ ಮೂಲದ ಮತ್ತೊಬ್ಬ ಸ್ಟಾರ್ ಕಲಾವಿದ ವಿರಾಟ್ ಮಡಕೆಯ ಮಾಸ್ ಲುಕ್ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಿತ್ರದ ಒಂದೊಂದೇ ಮಗ್ಗುಲನ್ನು ಹಂತ ಹಂತವಾಗಿ ಚಿತ್ರ ಪ್ರೇಮಿಗಳಿಗೆ ಪರಿಚಯಿಸುತ್ತಿದ್ದಾರೆ.
ಈ ಚಿತ್ರ ಕನ್ನಡ ಮರಾಠಿ ಹಿಂದಿ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದ್ದು ಚಿತ್ರ ರಸಿಕರಿಗೆ ಇಷ್ಟವಾಗುವ ರೀತಿಯಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ ಎನ್ನುವುದು ನಿರ್ದೇಶಕ ಸಡಗರ ರಾಘವೇಂದ್ರ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ತನ್ನ ಮೊದಲನೇ ಚಿತ್ರ ಜಿಲ್ಕಾ ನಂತರ ಕವೀಶ್ ಶೆಟ್ಟಿ ಸಂಪೂರ್ಣ ಮಾಸ್ ಶೈಲಿಯಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಈ ಚಿತ್ರದ ಇನ್ನೊಂದು ಹೈಲೈಟ್ ಮೇಘಾ ಶೆಟ್ಟಿ. ತಮ್ಮ ಸಹಜ ನಟನೆಯ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಮೇಘಾ ಶೆಟ್ಟಿ ನಾಯಕಿಯಾಗಿ ಈ ಚಿತ್ರದಲ್ಲಿ ಬಜಾರಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ತುಂಬಾ ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮರಾಠಿಯ ಶಿವಾನಿ ಸುರ್ವೆ, ವಿರಾಟ್ ಮಡಕೆ ಮುಂತಾದ ಹೆಸರಾಂತ ಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.
ಈಗಾಗಲೇ ಉಡುಪಿ ಚಿಕ್ಕಮಗಳೂರು ಸುತ್ತಮುತ್ತ ಭಟ್ಕಳ ಕಳಸ ಕಾಡು ಮತ್ತು ಬೆಂಗಳೂರು ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು ಇನ್ನು ಕೆಲವೇ ದಿನಗಳ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಸಜ್ಜಾಗುತ್ತಿದೆ. ವಿಜಯ್ ಕುಮಾರ್ ಶೆಟ್ಟಿ ಹವರಾಲ್ ದೀಪಕ್ ರಾಣೆ ರಮೇಶ್ ಕೊಠಾರಿ ಮತ್ತು ವಿಜಯ್ ಪ್ರಕಾಶ್ ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲ್ಮ್ ಲಾಂಛನದಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.