ಯೋಗರಾಜ್ ಸಿನೆಮಾಸ್ ಹಾಗು ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ ನಿರ್ಮಿಸಿ, ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪದವಿಪೂರ್ವ’ ಚಿತ್ರ ಅದಾಗಲೇ ಅನೇಕ ಕಾರಣಗಳಿಗಾಗಿ ಸದ್ದು ಮಾಡುತ್ತಿದೆ. ಒಂದೆಡೆ ಹೊಸ ಪ್ರತಿಭೆಗಳ ದಂಡೇ ಇರುವ ಈ ಚಿತ್ರದಲ್ಲಿ ಹಿರಿ ಮತ್ತು ಕಿರುತೆರೆಯ ಹೆಸರಾಂತ ನಟರುಗಳು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡು ಸದ್ದು ಮಾಡಿತ್ತು. ಸಾಕಷ್ಟು ಕಾರಣಗಳಿಂದಾಗಿ ಶೂಟಿಂಗ್ ಶುರುವಾದ ದಿನದಿಂದಲೂ ಕುತೂಹಲ ಮೂಡಿಸಿರುವ ಈ ಚಿತ್ರದಿಂದ ಈಗ ಮತ್ತೊಂದು ವಿಶೇಷ ಸುದ್ದಿ ಹೊರಬಿದ್ದಿದೆ.
ಅದೇನೆಂದರೆ, ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಸಾರಥ್ಯದಲ್ಲಿ ಚಿತ್ರದ ಹಾಡುಗಳ ಧ್ವನಿ ಮುದ್ರಣ ಕಾರ್ಯ ಶುರುವಾಗಿದ್ದು, ವಿಕಟಕವಿ ಯೋಗರಾಜ್ ಭಟ್ ರಚಿಸಿರುವ ‘ಫ್ರೆಂಡ್‌ಶಿಪ್ಪೆ ಜೀವನ’ ಎಂಬ ಅದ್ಭುತ ಸಾಲುಗಳಿಗೆ ಕನ್ನಡದ ಹೆಮ್ಮೆಯ ಗಾಯಕ ‘ವಿಜಯ್ ಪ್ರಕಾಶ್’ ದನಿಯಾಗಿದ್ದಾರೆ. ವಿಶೇಷ ಏನೂ ಅಂದ್ರೆ, ಈ ಹಾಡನ್ನು ರೆಕಾರ್ಡ್ ಮಾಡುವಾಗ ವಿಜಯ್ ಪ್ರಕಾಶ್ ಅವರು ಪದೇ ಪದೇ ಭಾವುಕರಾಗಿ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಸ್ನೇಹದ ಮಹತ್ವ ಸಾರುವ ಭಟ್ಟರ ಸಾಹಿತ್ಯವನ್ನು ಬಹಳವಾಗಿ ಮೆಚ್ಚಿ ಕೊಂಡಾಡಿದ್ದಾರೆ. ವಿಜಯ್ ಪ್ರಕಾಶ್ ಆವರ ಪ್ರತಿಕ್ರಿಯೆಯಿಂದ ಚಿತ್ರತಂಡ ಫುಲ್ ಥ್ರಿಲ್ ಆಗಿದ್ದು, ಹಾಡನ್ನು ಆದಷ್ಟು ಬೇಗ ಸಿನಿಪ್ರೇಮಿಗಳ ಮುಂದಿಡುವ ಉತ್ಸಾಹದಲ್ಲಿದೆ.
ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ಖ್ಯಾತ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಚಿತ್ರದ ಕ್ಯಾಮೆರಾ ಹೊಣೆ ಹೊತ್ತಿದ್ದಾರೆ. ಪಂಚತಂತ್ರ ಖ್ಯಾತಿಯ ಮಧು ತುಂಬಕೆರೆ ಸಂಕಲನದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಚಿತ್ರ ಈ ವರ್ಷವೇ ತೆರೆಕಾಣಲಿದ್ದು, ಯೋಗರಾಜ್ ಭಟ್ ಬ್ಯಾನರಿನಡಿಯಲ್ಲಿ ಮೂಡಿಬರುತ್ತಿರುವುದರಿಂದ ಸಿನಿ ಹಾಗು ಪ್ರೇಕ್ಷಕ ವಲಯದಲ್ಲಿ ‘ಪದವಿಪೂರ್ವ’ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.