HomeNews"ತುರ್ತು ನಿರ್ಗಮನ" ಚಿತ್ರದಿಂದ ಮತ್ತೆ ಎಂಟ್ರಿ "ಸುನಿಲ್ ರಾವ್"

“ತುರ್ತು ನಿರ್ಗಮನ” ಚಿತ್ರದಿಂದ ಮತ್ತೆ ಎಂಟ್ರಿ “ಸುನಿಲ್ ರಾವ್”

“ತುರ್ತು ನಿರ್ಗಮನ” ದ ಮೂಲಕ ಸುನೀಲ್ ರಾವ್

ಚಿತ್ರದ ವಿಭಿನ್ನ ಟ್ರೇಲರ್ ಗೆ ಭಾರಿ ಮೆಚ್ಚುಗೆ.

ಕೆಲವೊಂದು ಚಿತ್ರಗಳು ಹೇಗಿರಬಹುದು? ಎಂದು ಟ್ರೇಲರ್ ನೋಡಿದಾಗ ತಿಳಿಯುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಹೇಮಂತ್ ಕುಮಾರ್ ನಿರ್ದೇಶಿಸಿರುವ “ತುರ್ತು ನಿರ್ಗಮನ” ಚಿತ್ರದ ವಿಭಿನ್ನ ಹಾಗೂ ವಿಶೇಷ ಟ್ರೇಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ಇದೇ ಜೂನ್ 24 ರಂದು ಚಿತ್ರ ಬಿಡುಗಡೆಯಾಗುತ್ತಿದೆ.

“ಎಕ್ಸ್ ಕ್ಯೂಸ್ ಮಿ” ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದ ನಟ ಸುನೀಲ್ ರಾವ್. ಹನ್ನೆರಡು ವರ್ಷಗಳ ನಂತರ ಮತ್ತೆ “ತುರ್ತು ನಿರ್ಗಮನ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಪ್ರಮುಖ ಪಾತ್ರದಲ್ಲಿ ಸುನೀಲ್ ರಾವ್ ಅಭಿನಯಿಸಿದ್ದಾರೆ.

ನಿರ್ದೇಶಕ ಹೇಮಂತ್ ಕುಮಾರ್ ಹೇಳಿದ ಕಥೆ ಇಷ್ಟವಾಯಿತು. ಯಾರೇ ನಟರು ಕೇಳಿದ್ದರೂ, ಬೇಡ ಅನ್ನದಂತಹ ಕಥೆಯನ್ನು ಹೇಮಂತ್ ಕುಮಾರ್ ಹೆಣೆದಿದ್ದಾರೆ. ಆದರಿಂದ ನಾನು ಒಪ್ಪಿಕೊಂಡೆ. ನಾನು ಹನ್ನೆರಡು ವರ್ಷಗಳಿಂದ ಚಿತ್ರ ಮಾಡಿಲ್ಲ.ಆದರೆ, ಅಷ್ಟು ವರ್ಷಗಳ ನಂತರ ಇಂತಹ ಒಳ್ಳೆಯ ಚಿತ್ರ ಮಾಡಿದ ಖುಷಿಯಿದೆ ಎನ್ನುತ್ತಾರೆ ಸುನೀಲ್ ರಾವ್.

ನಾನು ಹೇಮಂತ್ ರಾವ್ ಬಳಿ “ಗೋಧಿ ಬಣ್ಣ ಸಾಧಾರಣ ಮೈಕಟ್ಟು” ಚಿತ್ರಕ್ಕೆ ಕೆಲಸ ಮಾಡಿದ್ದೆ. ಸ್ವತಂತ್ರವಾಗಿ ಇದು ಮೊದಲ ಚಿತ್ರ. ಈ ರೀತಿಯ ಕಥೆ ಆಧರಿಸಿ ಚಿತ್ರ ಮಾಡಬೇಕೆಂಬ ಆಸೆಯಿತ್ತು. ಅದು ಈಡೇರಿದೆ. ನನ್ನ ಚಿತ್ರತಂಡದ ಎಲ್ಲರ ಸಹಕಾರವನ್ನು ನೆನೆಯುತ್ತೇನೆ. ನಿಮ್ಮ ದುಡ್ಡಿಗೆ ಮೋಸವಾಗದ ಸಿನಿಮಾ ಮಾಡಿದ್ದೇನೆ ಎಂಬ ಭರವಸೆಯೊಂದಿಗೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುತ್ತೇನೆ ಎನ್ನುತ್ತಾರೆ ನಿರ್ದೇಶಕ ಹೇಮಂತ್ ಕುಮಾರ್

ನಾವು ಬೇರೆ ಭಾಷೆಗಳಲ್ಲಿ ವಿಭಿನ್ನ ಕಥೆಯ ಚಿತ್ರಗಳು ಬಂದರೆ ಹೋಗಿ ನೋಡುತ್ತೇವೆ. “ತುರ್ತು ನಿರ್ಗಮನ” ಕೂಡ ಒಂದು ಪ್ರಯೋಗಾತ್ಮಕ ಚಿತ್ರ. ಇಂತಹ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಎಂದರು ಹಿತ ಚಂದ್ರಶೇಖರ್.

ನಾನು ಈ ಚಿತ್ರದಲ್ಲಿ ಕ್ರಿಕೆಟ್
ಕೋಚ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೊಂದು ವಿಷುಯಲ್ ಟ್ರೀಟ್ ಅನ್ನಬಹುದು. ಗ್ರಾಫಿಕ್ ಅಂತು ಅದ್ಭುತ. ಹಾಗಾಗಿ ಇದನ್ನು ಮನೆಯಲ್ಲಿ ನೋಡುವುದಕ್ಕಿಂತ ಚಿತ್ರಮಂದಿರಕ್ಕೆ ಬಂದು ನೋಡಬೇಕು ಎಂದರು ಸಂಯುಕ್ತ ಹೆಗಡೆ.

ನನಗೆ ಮೊದಲು ನಿರ್ದೇಶಕರು ಕಥೆ ಹೇಳಿದಾಗ ಅಷ್ಟು ಅರ್ಥವಾಗಲಿಲ್ಲ. ಕ್ರಮೇಣ ನಟಿಸುತ್ತಾ ಅರ್ಥವಾಯಿತು. ಸಿನಿಮಾ ಪೂರ್ಣವಾದ ಮೇಲಂತೂ ಇಂತಹ ಚಿತ್ರದಲ್ಲಿ ನಟಿಸಿದ್ದಿನಲ್ಲಾ ಎಂಬ ಖುಷಿಯಿದೆ ಎಂದರು ಅಮೃತ.

ನಾನು ಚಿತ್ರರಂಗಕ್ಕೆ ಬಂದು ಮೂವತ್ತಾರು ವರ್ಷಗಳಾಯಿತು. ಬೇಕಾದಷ್ಟು ಚಿತ್ರಗಳಲ್ಲಿ ಬೇರೆ, ಬೇರೆ ಪಾತ್ರಗಳನ್ನು ಮಾಡಿದ್ದೀನಿ. ಆದರೆ ಈ ರೀತಿಯ ಪಾತ್ರ ಮಾಡಿರುವುದು ಇದೇ ಮೊದಲು. ನನ್ನ ಮೊದಲ ಚಿತ್ರ “ಆನಂದ್” ನಲ್ಲಿ ನಟಿಸಿದ್ದಾಗ ಆಗಿದ್ದ ಸಂತೋಷ ಈ ಚಿತ್ರದಲ್ಲಿ ನಟಿಸಿದ ಮೇಲೇ ಆಗಿದೆ ಎಂದರು ನಟಿ ಸುಧಾರಾಣಿ.


ನನ್ನ “ಒಂದು ಮೊಟ್ಟೆಯ ಕಥೆ” ಚಿತ್ರ ಆಗಷ್ಟೇ ರಿಲೀಸ್ ಆಗಿತ್ತು. ಆಗ ಈ ಚಿತ್ರದ ಆಡಿಷನ್ ನಡೆಯುತ್ತಿತ್ತು. ನನಗೆ ಹೇಮಂತ್ ಕುಮಾರ್ ಮೂರು ಪುಟಗಳ ಸಂಭಾಷಣೆ ಕಳುಹಿಸಿದ್ದರು. ಅದನ್ನು ನೋಡಿ ನಾನು ಈ ಸಿನಿಮಾದಲ್ಲಿ ಅಭಿನಯಿಸಬೇಕೆಂದು ನಿರ್ಧಾರ ಮಾಡಿದೆ. ಆಡಿಷನ್ ನಲ್ಲಿ ಸೆಲೆಕ್ಟ್ ಆದೆ ಎಂದ ರಾಜ್ ಬಿ ಶೆಟ್ಟಿ, ಈ ಚಿತ್ರದಲ್ಲಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು.

ಹಾಡುಗಳ ಬಗ್ಗೆ ಧೀರೇಂದ್ರ ದಾಸ್ ಮೂಡ್, ಛಾಯಾಗ್ರಹಣದ ಕುರಿತು ಪ್ರಯಾಗ್ ಹಾಗೂ ಚಿತ್ರ ಸಾಗಿ ಬಂದ ಬಗ್ಗೆ ಕಾರ್ಯಕಾರಿ ನಿರ್ಮಾಪಕ ಶರತ್ ಭಗವಾನ್ ಮಾತನಾಡಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸುಧಾರಾಣಿ, ಸುನೀಲ್ ರಾವ್ ಹಾಗೂ ರಾಜ್ ಬಿ ಶೆಟ್ಟಿ ಚಿತ್ರದ ತಮ್ಮ ಪಾತ್ರಗಳನ್ನು ವೇದಿಕೆ ಮೇಲೆ ನೈಜವಾಗಿ ಅಭಿನಯಿಸುವ ಮೂಲಕ ಪರಿಚಯಿಸಿದರು.

Must Read

spot_img
Share via
Copy link
Powered by Social Snap