“ಎಕ್ಸ್ ಕ್ಯೂಸ್ ಮಿ” ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ನಟ ಸುನೀಲ್ ರಾವ್. “ಓಲ್ಡ್ ಮಾಂಕ್” ಸೇರಿದಂತೆ ಕೆಲವು ಚಿತ್ರಗಳಲ್ಲಿ ಆತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಮೂಲಕ ಸುನೀಲ್ ರಾವ್
ನಾಯಕನಾಗಿ ಮರುಪ್ರವೇಶ ಮಾಡುತ್ತಿದ್ದಾರೆ. ಹೇಮಂತ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಜನಮನಸೂರೆಗೊಂಡಿದೆ. ಚಿತ್ರ ಜೂನ್ 24ರಂದು ಬಿಡುಗಡೆಯಾಗಲಿದೆ.
ನಮ್ಮ ಚಿತ್ರದ ಟ್ರೇಲರ್ ಗೆ ಬರುತ್ತಿರುವ ಮೆಚ್ಚುಗೆ ನೋಡಿ ಮನ ತುಂಬಿ ಬಂದಿದೆ. ಇದೇ ಇಪ್ಪತ್ತನಾಲ್ಕು ಬಿಡುಗಡೆಯಾಗುತ್ತಿದೆ. ಒಳ್ಳೆಯ ಪ್ರಯತ್ನ ಮಾಡಿದ್ದೇವೆ. ನೋಡಿ ಹಾರೈಸಿ ಎಂದರು ಚಿತ್ರದ ನಿರ್ಮಾಪಕರು ಆಗಿರುವ ನಿರ್ದೇಶಕ ಹೇಮಂತ್ ಕುಮಾರ್.
ನಾನು ನಾಯಕನಾಗಿ ನಟಿಸಿ ಬಹಳ ವರ್ಷಗಳೇ ಆಗಿತ್ತು. ಈ ಚಿತ್ರದ ಮೂಲಕ ನಾಯಕನಾಗಿ ಮರುಪ್ರವೇಶ ಮಾಡುತ್ತಿದ್ದೇನೆ. ಟ್ರೇಲರ್ ನೋಡಿದ್ದ ಅನೇಕ ಗೆಳೆಯರು ಅಭಿನಂದಿಸುತ್ತಿದ್ದಾರೆ. ಈ ಪ್ರಶಂಸೆಗೆ ಮನತುಂಬಿ ಬಂದಿದೆ. ನಿರ್ದೇಶಕ ಹೇಮಂತ್ ಕುಮಾರ್ ಪ್ರತಿಭಾವಂತ ನಿರ್ದೇಶಕ ಅವರು ಕಥೆ ಹೇಳಿ, ಅರ್ಧ ಗಂಟೆಗೆ ನಾನು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಉತ್ತಮ ತಂತ್ರಜ್ಞರು ಹಾಗೂ ಕಲಾವಿದರಿಂದ ಕೂಡಿದ ತಂಡವಿದು. ಟ್ರೇಲರ್ ಗೆ ಸಿಕ್ಕಿರುವ ಪ್ರಶಂಸೆ ಸಿನಿಮಾಗೂ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು ಸುನೀಲ್ ರಾವ್.
ನಾನು ಕ್ಯಾಬ್ ಡ್ರೈವರ್ ಪಾತ್ರ ಮಾಡಿದ್ದೀನಿ. ಕಾರ್ ಡ್ರೈವಿಂಗ್ ಬರುತ್ತಿರಲಿಲ್ಲ. ನನಗೆ ಡ್ರೈವಿಂಗ್ ಹೇಳಿಕೊಟ್ಟ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಈಗ ಮಂಗಳೂರಿನಿಂದ ನಾನೇ ಕಾರ್ ಓಡಿಸಿಕೊಂಡು ಬರುತ್ತೇನೆ ಎಂದರು ರಾಜ್ ಬಿ ಶೆಟ್ಟಿ.
ನಾನು ಇಷ್ಟು ವರ್ಷಗಳಿಂದ ಅನೇಕ ಚಿತ್ರಗಳಲ್ಲಿ ಅನೇಕ ಪಾತ್ರಗಳನ್ನು ಮಾಡಿದ್ದೀನಿ. ಆದರೆ ಇಂತಹ ಪಾತ್ರ ಮಾಡಿಲ್ಲ. ಅವಕಾಶ ಕೊಟ್ಟ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು ನಟಿ ಸುಧಾರಾಣಿ.
ಈ ಚಿತ್ರವನ್ನು ಓಟಿಟಿಯಲ್ಲಿ ನೋಡುವುದಕ್ಕಿಂತ ಚಿತ್ರಮಂದಿರದಲ್ಲಿ ನೋಡಬೇಕು. ಅಂತಹ ಅದ್ಭುತ ಗ್ರಾಫಿಕ್ ನಮ್ಮ ಚಿತ್ರದಲ್ಲಿದೆ. ನಾನು ಕ್ರಿಕೆಟ್ ಕೋಚ್ ಪಾತ್ರ ನಿರ್ವಹಣೆ ಮಾಡಿದ್ದೇನೆ ಎಂದರು ಸಂಯುಕ್ತ ಹೆಗಡೆ.
ಉತ್ತಮ ಚಿತ್ರದಲ್ಲಿ ನಟಿಸಿರುವ ಖುಷಿ ಯಿದೆ. ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ ಎಂದರು ಹಿತ ಚಂದ್ರಶೇಖರ್.
ಸಂಗೀತ ನಿರ್ದೇಶಕ ಧೀರೇಂದ್ರ ದಾಸ್ ಮೂಡ್ ಹಾಗೂ ಛಾಯಾಗ್ರಾಹಕ ಪ್ರಯಾಗ್ ಕೂಡ ಚಿತ್ರದ ಕುರಿತು ಮಾತನಾಡಿದರು.