ಡೈರೆಕ್ಟರ್ ರಾಘವ ಶಿವಗಂಗೆ
ಪ್ರೊಡ್ಯೂಸರ್: ರಾಜು ಸೇರೆಗರ್
ಕಾಸ್ಟ್: ಚೈತ್ರ ರಾವ್ ನಿಶ್ಚಿತ್ ಕೊರೋಡಿ. ತಾರಾ ಜೈಜಗದೀಶ್ ಕಡ್ಡಿಪುಡಿ ಚಂದ್ರು ಮುಂತಾದವರು
ದೇವರು ಮನುಷ್ಯನನ್ನು ಒಂದಷ್ಟು ನಿರ್ಧಿಷ್ಟ ಕಾರಣಕ್ಕೋಸ್ಕರ ಸೃಷ್ಟಿ ಮಾಡಿದ. ಅದನ್ನು ಅರ್ಥ ಮಾಡಿಕೊಳ್ಳದ ನಾವು ಸುಮ್ಮನೇ ಬಂದೇ ಪುಟ್ಟ ಹೋದ ಪುಟ್ಟ ಅಂತಾ ಜೀವಿಸ್ತೀವಿ. ನೀವೆಲ್ಲಾ ನಿಮ್ಮದೇ ಆದ ಇತಿಹಾಸವನ್ನು ಈ ಭೂಮಿ ಮೇಲೆ ಸೃಷ್ಟಿ ಮಾಡಬೇಕು. ದೊಡ್ಡ ಮನುಷ್ಯರಾಗಿ ಬೆಳೀಬೇಕು ಎನ್ನುವ ಹಿನ್ನೆಲೆ ಧ್ವನಿಯೊಂದಿಗೆ ಆರಂಭಗೊಳ್ಳುವ ಕತೆ ಟಾಮ್ ಅಂಡ್ ಜೆರ್ರಿಯದ್ದು. ಎಲ್ಲರಿಗೂ ಕಾಲಿದ್ರೂ ಕಾರಲ್ಲಿ ಯಾಕೆ ಓಡಾಡ್ತಾರೆ ಎನ್ನುವ ಹುಡುಗನ ಪ್ರಶ್ನೆಗೆ ಕಾಲಲ್ಲಿ ಓಡಾಡೋನನ್ನು ಮನುಷ್ಯ ಅಂತಾರೆ, ಅದೇ ಕಾರಲ್ಲಿ ಓಡಾಡಿದರೆ ದೊಡ್ಡ ಮನ್ಷ ಅಂತಾರೆ… ಪುಟಾಣಿ ಹೀರೋ ಕೇಳುವ ಪ್ರಶ್ನೆಗೆ ತಿಳಿದವರಿಂದ ಇಂಥದ್ದೊಂದು ಉತ್ತರ ಸಿಕ್ಕಿರುತ್ತದೆ. ಆವತ್ತೇ ಆತ ದೊಡ್ಡ ಮನುಷ್ಯನಾಗಿ ಬೆಳೀಬೇಕು ಎನ್ನುವ ಕನಸು ಕಂಡಿರುತ್ತಾನೆ.
– ಅದು ಅನಾಥಾಶ್ರಮ. ಅಲ್ಲಿ ಬೆಳೆಯುತ್ತಿದ್ದ ಹುಡುಗ-ಹುಡುಗಿಯನ್ನು ಪ್ರತ್ಯೇಕವಾಗಿ ಇಬ್ಬರು ದತ್ತು ಪಡೆದು ಹೋಗಿರುತ್ತಾರೆ. ಮುಂದೆ ಅವರಿಬ್ಬರೂ ಬೆಳೆದು ದೊಡ್ಡವರಾಗಿ ಒಬ್ಬರನ್ನೊಬ್ಬರು ಸಂಧಿಸುತ್ತಾರೆ. ಪರಸ್ಪರರಿಗೆ ಅದು ಗೊತ್ತಾದೋದು ಸ್ವಲ್ಪ ಲೇಟು ಅಷ್ಟೇ.
ಒಬ್ಬರಿಗೊಬ್ಬರು ವಿರುದ್ಧ ದಿಕ್ಕಿನಲ್ಲಿ ಚಿಂತಿಸುವ ಜೋಡಿ. ಅವನಿಗೆ ಹಣ ಸಂಪಾದಿಸಿ ದೊಡ್ಡ ಮನ್ಷನಾಗುವ ಬಯಕೆ. ಅವಳದ್ದು ಇರುವುದೆಲ್ಲವನ್ನು ಬಿಟ್ಟು ಇರದುದರೆಡೆಗೆ ತುಡಿಯುವ ಮನಸ್ಥಿತಿ. ಮಧ್ಯಮವರ್ಗದ ಜೀವನಕ್ಕೆ ತನ್ನನ್ನು ತಾನು ಒಗ್ಗಿಸಿಕೊಂಡು, ಎಲ್ಲದಕ್ಕೂ ಕಾದು ಪಡೆಯುವ ಬಡತನವನ್ನು ಎಂಜಾಯ್ ಮಾಡಬೇಕು ಎನ್ನುದು ಅವಳ ಥಿಯರಿ. ಜಗತ್ತಿನ ಕಣ್ಣಿನಲ್ಲಿ ವಿಚಿತ್ರವಾಗಿ ಚಿಂತಿಸುವ ಮೆಂಟ್ಲು ಹುಡುಗಿ. ಕಷ್ಟದಲ್ಲಿದ್ದವರನ್ನು ಕೈ ಹಿಡಿಯೋದು, ಎನ್.ಜಿ.ಓ.ದಲ್ಲಿ ಕೆಲಸ ಮಾಡೋದು ಅವಳ ಪ್ರವೃತ್ತಿ. ಹುಡುಗ ಕಂಪನಿಯೊಂದರಲ್ಲಿ ಮೆಕಾನಿಕ್.
ಈ ಇಬ್ಬರೂ ಜೊತೆಯಾಗೋದು ಸಿಟಿ ಬಸ್ಸಿನಲ್ಲಿ. ಆ ಬಸ್ಸಿನಲ್ಲಿ ನಿತ್ಯವೂ ಪ್ರಯಾಣಿಸುವ ಪ್ರಯಾಣಿಕರು, ಅವರ ಬದುಕಿನ ಜೊತೆಗೆ ಬೆರೆತು ಹೋದ ಕಂಡಕ್ಟರು. ದಿನವೂ ಏರ್ಪಡುವ ಯಾವುದಾದರೂ ಒಂದು ಟಾಪಿಕ್ಕಿನ ಚರ್ಚಾಸ್ಪರ್ಧೆಯಲ್ಲಿ ನಾಯಕ-ನಾಯಕಿ ಕೂಡಾ ಸೇರಿಕೊಳ್ಳುತ್ತಾರೆ. ಈ ಚರ್ಚೆ ಬಸ್ಸಿಗೆ ಮಾತ್ರ ಸೀಮಿತವಾಗುವುದಿಲ್ಲ.
ಏನೇ ಇರಲಿ, ಈ ಚಿತ್ರದ ಮೂಲಕ ಗಂಟು ಮೂಟೆ ಹುಡುಗ ನಿಶ್ಚಿತ್ ಹೀರೋ ಆಗಿ ಕಾಲಿಟ್ಟಿದ್ದಾನೆ. ಈತನ ಆಯ್ಕೆ ಸರಿಯಾಗಿದ್ದೇ ಆದಲ್ಲಿ ಕನ್ನಡಕ್ಕೊಬ್ಬ ಪಕ್ಕಾ ಮಾಸ್ ಹೀರೋ ಆಗಿ ನಿಲ್ಲೋದು ನಿಜ. ಜೋಡಿಹಕ್ಕಿ ಸೀರಿಯಲ್ ಹುಡುಗಿ ಚೈತ್ರಾ ರಾವ್ ಲೀಲಾಜಾಲವಾಗಿ ನಟಿಸುವ ಶಕ್ತಿ ಹೊಂದಿದ್ದಾಳೆ. ಸಾಧು ಕೋಕಿಲ ಅವರ ಅಣ್ಣ ಲಯೇಂದ್ರ ಮಗ ಮ್ಯಾಥ್ಯೂಸ್ ಮನು ಈ ಸಿನಿಮಾಗೆ ಮ್ಯೂಸಿಕ್ ನೀಡಿದ್ದಾನೆ. ನಿಜಕ್ಕೂ ಕನ್ನಡದ ಅದ್ಭುತ ಪ್ರತಿಭೆಗಳಲ್ಲಿ ಈತ ಕೂಡಾ ಒಬ್ಬ. ಹಾಯಾಗಿದೆ ಎದೆಯೊಗಳಗೆ ಎನ್ನುವ ಹಾಡಿಗೆ ಈತ ನೀಡಿರುವ ಟ್ಯೂನು ಮತ್ತು ಸ್ವತಃ ತಾನೇ ಬರೆದಿರುವ ಲಿರುಕ್ಕು ಸಾಕು ಈತನ ತಾಕತ್ತು ಎಂಥಾದ್ದು ಅನ್ನೋದನ್ನು ಜಾಹೀರು ಮಾಡಲು. ಸಾಲದ್ದಕ್ಕೆ ಮ್ಯಾಥ್ಯೂಸ್ ಸಣ್ಣದೊಂದು ಪಾತ್ರದಲ್ಲೂ ಅಚ್ಚುಕಟ್ಟಾಗಿ ನಟಿಸಿದ್ದಾನೆ. ಕನ್ನಡದ ಶ್ರೇಷ್ಟ ನಟರ ಸಾಲಿನಲ್ಲಿರುವ ಸಂಪತ್ ಕುಮಾರ್ ಕೂಡಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಟಿಕ್ ಟಾಕ್ ರವಿ ಪಾತ್ರದಲ್ಲಿ ನಟಿಸುರವ ಶೇಖರ್ ಇವತ್ತಲ್ಲಾ ನಾಳೆ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆಯೋದು ಗ್ಯಾರೆಂಟಿ.