ಕಳೆದವರ್ಷ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ
“ರಾಬರ್ಟ್” ಚಿತ್ರದಲ್ಲಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಅವರ ಹೊಸಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.
ತಮ್ಮ ನಟನೆಯ ಮೂಲಕ ಜನಮನಸೂರೆಗೊಂಡಿರುವ ವಿನೋದ್ ಪ್ರಭಾಕರ್ ಈಗ ನಿರ್ಮಾಪಕರಾಗಿದ್ದಾರೆ. ತಮ್ಮ ನಿರ್ಮಾಣದ ಮೊದಲ ಹೆಜ್ಜೆಯಾಗಿ “ಲಂಕಾಸುರ” ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿನೋದ್ ಪ್ರಭಾಕರ್ ರವರ ಶ್ರೀಮತಿ ನಿಶಾ ವಿನೋದ್ ಪ್ರಭಾಕರ್ ರವರು ಈ ಚಿತ್ರದ ನಿರ್ಮಾಪಕರು .
ತಮ್ಮ ನಿರ್ಮಾಣ ಸಂಸ್ಥೆಗೆ “ಟೈಗರ್ ಟಾಕಿಸ್” ಎಂಬ ಹೆಸರಿಟ್ಟರುವ ವಿನೋದ್ ಪ್ರಭಾಕರ್ ರವರು ತಮ್ಮ ತಂದೆ ಟೈಗರ್ ಪ್ರಭಾಕರ್ ಅವರನ್ನು ಸ್ಮರಿಸಿಕೊಂಡು ಹೊಸಹೆಜ್ಜೆ ಇಟ್ಟಿದ್ದಾರೆ.
ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸುತ್ತಿದ್ದಾರೆ . ಇದು ಇವರಿಬ್ಬರು ಒಟ್ಟಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ. ದೇವರಾಜ್, ರವಿಶಂಕರ್ ಮುಂತಾದವರ ತಾರಾಬಳಗ ಸಹ ಈ ಚಿತ್ರದಲ್ಲಿದೆ.
ಆಕ್ಷನ್ ಕಥಾಹಂದರದ ಈ ಚಿತ್ರವನ್ನು ಪ್ರಮೋದ್ ಕುಮಾರ್ ಡಿ ಎಸ್ ನಿರ್ದೇಶಿಸುತ್ತಿದ್ದಾರೆ. ಡಿರ್ಫೆಂಟ್ ಡ್ಯಾನಿ, ವಿನೋದ್, ಕುಂಪ್ಫು ಚಂದ್ರು, ಅರ್ಜುನ್ ರಾಜ್ ಹಾಗೂ ಚೇತನ್ ಡಿಸೋಜ ಸಾಹಸ ನಿರ್ದೇಶನ ಮಾಡಿದ್ದಾರೆ .
ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಭರ್ಜರಿ ಚೇತನ್ ಗೀತರಚನೆ ಮಾಡಿದ್ದಾರೆ.
ಸಿದ್ಲಿಂಗು, ಜಯಮ್ಮನ ಮಗ ಹಾಗೂ ಐ ಲವ್ ಯು ಮುಂತಾದ ಜನಪ್ರಿಯ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕಾರ್ಯನಿರ್ವಹಿಸಿರುವ ಸುಜ್ಞಾನ್(ಜ್ಞಾನ ಮೂರ್ತಿ) ಈ ಚಿತ್ರಕ್ಕೂ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುರಳಿ, ಮೋಹನ್ ರವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ರವರ ಸಂಕಲನ ಈ ಚಿತ್ರಕ್ಕಿದೆ.
ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣವು ಬಿರುಸಿನಿಂದ ಸಾಗಿದೆ.