ಅತೀ ನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ್’ ಕೃತಿಯನ್ನು ಹೆಸರಾಂತ ನಟ ಕಿಚ್ಚ ಸುದೀಪ್ ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದಿರುವ ಈ ಕೃತಿ ಈಗಾಗಲೇ ಬಿಡುಗಡೆಗೂ ಮುನ್ನ ಎರಡನೇ ಮುದ್ರಣ ಕಂಡಿದೆ.
ಕೃತಿಯ ಬಿಡುಗಡೆ ನಂತರ ಮಾತನಾಡಿದ ಸುದೀಪ್, ‘ಒಂದೊಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ’ ಎಂದರು. ಅಲ್ಲದೇ ‘ಯಾವತ್ತಿಗೂ ನಾನು ಪುನೀತ್ ಅವರನ್ನು ಮೀಸ್ ಮಾಡಿಕೊಳ್ಳುತ್ತೇನೆ’ ಎಂದರು.
ಕಿಚ್ಚ ಸುದೀಪ್ ಅವರ ಪುಸ್ತಕವನ್ನು ಎರಡು ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದರು. ಪುನೀತ್ ಅವರ ಬಯೋಗ್ರಫಿಯನ್ನು ಇದೀಗ ಸುದೀಪ್ ಅವರು ರಿಲೀಸ್ ಮಾಡಿದ್ದು ಭಾವುಕತೆಗೆ ಸಾಕ್ಷಿಯಾಗಿತ್ತು.
ಈ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಾದ ಜಾಕ್ ಮಂಜು ಮತ್ತು ಕುಮಾರ್ ಹಾಗೂ ಸಾವಣ್ಣ ಪ್ರಕಾಶನದ ಜಮೀಲ್ ಮತ್ತು ಲೇಖಕ ಶರಣು ಹುಲ್ಲೂರು ಉಪಸ್ಥಿತರಿದ್ದರು.
ಪುನೀತ್ ಅವರ ಕುರಿತಾಗಿ ಬಂದಂತಹ ಮೊದಲ ಬಯೋಗ್ರಫಿ ಇದಾಗಿದ್ದು, 260ಕ್ಕೂ ಹೆಚ್ಚು ಪುಟಗಳನ್ನು ಹೊಂದಿದೆ. ಪುನೀತ್ ಅವರ ಹುಟ್ಟು ಹಬ್ಬದ ದಿನದಂದು ಬಿಡುಗಡೆಯಾಗಿದೆ. ಪುನೀತ್ ಅವರ ಖಾಸಗಿ ಜೀವನ, ವೃತ್ತಿ ಜೀವನ, ಅಪರೂಪದ ಸಂಗತಿಗಳು ಮತ್ತು ಫೋಟೋಗಳನ್ನುಈ ಪುಸ್ತಕದಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ ಲೇಖಕ ಶರಣು ಹುಲ್ಲೂರು.