HomeNewsಧ್ರುವ ಸರ್ಜಾ ಬಿಡುಗಡೆ ಮಾಡಿದರು ವಿಭಿನ್ನ ಕಥೆಯ "ಠಾಣೆ" ಚಿತ್ರದ ಪೋಸ್ಟರ್.

ಧ್ರುವ ಸರ್ಜಾ ಬಿಡುಗಡೆ ಮಾಡಿದರು ವಿಭಿನ್ನ ಕಥೆಯ “ಠಾಣೆ” ಚಿತ್ರದ ಪೋಸ್ಟರ್.

ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ “ಠಾಣೆ” ಚಿತ್ರದ ಪೋಸ್ಟರ್ ಧ್ರುವ ಸರ್ಜಾ ಅವರಿಂದ ಬಿಡುಗಡೆಯಾಗಿದೆ.

ಈ ಪೋಸ್ಟರ್ ನೋಡಿದರೆ ಇಡೀ ಚಿತ್ರ ನೋಡಿದ ಹಾಗೆ ಆಗುತ್ತಿದೆ. ಪೋಸ್ಟರ್ ತುಂಬಾ ಚೆನ್ನಾಗಿದೆ. ಚಿತ್ರ ಕೂಡ ಅಷ್ಟೇ ಚೆನ್ನಾಗಿರುತ್ತದೆ ಎಂದು ಅನಿಸುತ್ತದೆ. ಚಿತ್ರ ಯಶಸ್ವಿಯಾಗಲಿ ಎಂದು ಧ್ರುವ ಸರ್ಜಾ ಹಾರೈಸಿದರು.

ಕಳೆದ ಹದಿನೈದು ವರ್ಷಗಳಿಂದ ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡಿರುವ, ಕೌರವ ವೆಂಕಟೇಶ್ ಸೇರಿದಂತೆ ಅನೇಕ ಸಾಹಸ ನಿರ್ದೇಶಕರ ಬಳಿ ಕೆಲಸ ಮಾಡಿರುವ ಪ್ರಕಸಂ ತಂಡದ ಪ್ರವೀಣ್ “ಠಾಣೆ” ಚಿತ್ರದ ನಾಯಕ. ಭರತ ನಾಟ್ಯ ಸೇರಿದಂತೆ ಅನೇಕ ಕಲೆಗಳಲ್ಲಿ ನೈಪುಣ್ಯತೆ ಪಡೆದಿರುವ ಮೈಸೂರಿನ ಹರಿಣಾಕ್ಷಿ ಈ ಚಿತ್ರದ ನಾಯಕಿ. ಪಿ.ಡಿ.ಸತೀಶ್, ರಾಜ್ ಬೆಳವಾಡಿ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಟ, ನಿರ್ದೇಶಕ ಕಾಶಿನಾಥ್, ರಾಮನಾಥ್ ಋಗ್ವೇದಿ, ಗುರುಪ್ರಸಾದ್ ಮುಂತಾದವರ ಬಳಿ ಕಾರ್ಯ ನಿರ್ವಹಿಸಿರುವ ಎಸ್ ಭಗತ್ ರಾಜ್ ಈ ಚಿತ್ರದ ನಿರ್ದೇಶಕರು. ನಾವು ಧರಿಸುವ ಸೂಟ್ ಮೇಲೆ ಒಂದು ಕಥೆ ರಚಿಸಿ, ನಿರ್ದೇಶಿಸಿರುವ “ದಿ ಸೂಟ್” ಭಗತ್ ರಾಜ್ ನಿರ್ದೇಶನದ ಮೊದಲ ಚಿತ್ರ. “ಠಾಣೆ” ಎರಡನೇ ಚಿತ್ರ.

“ಠಾಣೆ” 1962 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ನಗರಗಳು ಬೆಳೆದರು, ಸ್ಲಂಗಳು ಬೆಳೆಯುವುದಿಲ್ಲ. ಅದು ಬೆಳೆಯಲು ಕೆಲವರು ಬಿಡುವುದು ಇಲ್ಲ. ಸ್ಲಂ ನಲ್ಲೇ ಹುಟ್ಟಿಬೆಳೆದ ಯುವಕ‌ನೊಬ್ಬ ಅಲ್ಲಿನ ಜನರಿಗೆ ನ್ಯಾಯ ಕೊಡಿಸಲು ಹೋರಾಡುವ ಕಥೆಯಿದು. ಆ ಕಾಲಘಟ್ಟದ ಕಥೆಯಾಗಿರುವುದರಿಂದ ಬೆಂಗಳೂರಿನ ಹಳೆ ಬಡಾವಣೆಗಳಾದ ಶ್ರೀರಾಮಪುರ, ಶಿವಾಜಿ ನಗರ ಮುಂತಾದ ಕಡೆ ಹಳೆಯ ಜಾಗಗಳನ್ನು ಹುಡುಕಿ ಚಿತ್ರೀಕರಣ ಮಾಡಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ಎರಡು ಸುಮಧುರ ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ನೀಡಿದ್ದಾರೆ. ಸಾಗರದ ಪ್ರಶಾಂತ್ ಸಾಗರ್ ಛಾಯಾಗ್ರಹಣ, ಹಿರಿಯ ಸಂಕಲನಕಾರ ಸುರೇಶ್ ಅರಸ್ ಸಂಕಲನ, ಪ್ರವೀಣ್ ಜಾನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಕೌರವ ವೆಂಕಟೇಶ್ ಹಾಗೂ ಟೈಗರ್ ಶಿವ ಸಾಹಸ ಸಂಯೋಜನೆಯಲ್ಲಿ ಐದು ಸಾಹಸ ಸನ್ನಿವೇಶಗಳು ಮೂಡಿಬಂದಿದೆ. ನಾಯಕ ಪ್ರವೀಣ್ ಅವರಿಗೂ ಸಾಹಸ ಸಂಯೋಜನೆ ಮಾಡಿ ಅನುಭವವಿರುವುದರಿಂದ ಅವರ ಅಭಿನಯದಲ್ಲಿ ಸಾಹಸ ಸನ್ನಿವೇಶಗಳು ಅದ್ಭುತವಾಗಿ ಮೂಡಿಬಂದಿದೆ.

“ಠಾಣೆ” ಚಿತ್ರದಲ್ಲಿ ಪ್ರವೀಣ್, ಕಾಳಿ ಎಂಬ ಪಾತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. C/O ಶ್ರೀರಾಮಪುರ ಎಂಬ ಅಡಿಬರಹ ಈ ಚಿತ್ರಕ್ಕಿದೆ.

Must Read

spot_img
Share via
Copy link
Powered by Social Snap