ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿರುವ ಕಿರಣ್ ರಾಜ್ ಅಭಿನಯದ “ಬಡ್ಡೀಸ್” ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಸಂತಸವನ್ನು ಚಿತ್ರತಂಡ ಹಂಚಿಕೊಂಡಿದ್ದು ಹೀಗೆ.
ನನ್ನನ್ನು ಇಷ್ಟು ದಿನ “ಕನ್ನಡತಿ” ಕಿರಣ್ ರಾಜ್ ಎನ್ನುತ್ತಿದ್ದರು. ಈಗ “ಬಡ್ಡೀಸ್” ಕಿರಣ್ ರಾಜ್ ಎನ್ನಲು ಆರಂಭಿಸಿದ್ದಾರೆ. ಸಿನಿಮಾ ಹೆಸರಿನಿಂದ ನನ್ನ ಹೆಸರು ಕರೆಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗಿದೆ. ಬೆಂಗಳೂರು, ಮೈಸೂರಿನ ಕೆಲವು ಚಿತ್ರಮಂದಿರಗಳಿಗೆ ಭೇಟಿ ಮಾಡಿದ್ದೇನೆ. ಜನರ ಸ್ಪಂದನೆ ಕಂಡು ಮನಸ್ಸು ತುಂಬಿ ಬಂದಿದೆ.
ಮೊದಲ ಚಿತ್ರಕ್ಕೆ ನೀವು ನೀಡುತ್ತಿರುವ ಬೆಂಬಲ ಅಪಾರ. ಎಲ್ಲರಿಗೂ ಧನ್ಯವಾದ ಎಂದರು ಕಿರಣ್ ರಾಜ್.
ದುಬೈ ನಿಂದ ಬಂದು ಕನ್ನಡ ಚಿತ್ರ ನಿರ್ಮಿಸಿದ್ದೇನೆ. ನಮ್ಮ ಚಿತ್ರಕ್ಕೆ ಕನ್ನಡಿಗರು ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದ. ಒಳ್ಳೆಯ ಚಿತ್ರ ನಿರ್ಮಾಣ ಮಾಡಿದ್ದೇನೆ ಎಂಬ ತೃಪ್ತಿ ಇದೆ ಎಂದರು ನಿರ್ಮಾಪಕಿ ಭಾರತಿ ಶೆಟ್ಟಿ.
ಚಿತ್ರ ಕರ್ನಾಟಕದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಇನ್ನೂ ಹೆಚ್ಚು ಜನಕ್ಕೆ ನಮ್ಮ ಚಿತ್ರ ತಲುಪಬೇಕು. ನಿರ್ದೇಶನಕ್ಕೆ ಅವಕಾಶ ನೀಡಿದ ನಿರ್ಮಾಪಕರಿಗೆ, ಸಹಕಾರ ನೀಡಿದ ಚಿತ್ರತಂಡಕ್ಕೆ ನಿರ್ದೇಶಕ ಗುರುವೇಂದ್ರ ಶೆಟ್ಟಿ ಧನ್ಯವಾದ ತಿಳಿಸಿದರು.
ತನ್ನ ಪಾತ್ರವನ್ನು ಮೆಚ್ಚಿಕೊಂಡಿರುವ ಸಿನಿರಸಿಕರು ಆ ಪಾತ್ರದ ಮೂಲಕವೇ ತಮ್ನನ್ನು ಗುರುತಿಸುತ್ತಿರುವುದಕ್ಕೆ ನಟಿ ಸಿರಿ ಪ್ರಹ್ಲಾದ್ ಸಂತಸಪಟ್ಟರು.
ಛಾಯಾಗ್ರಹಣ ಮಾಡಿರುವ ನಿಭಾ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.