Kannada Beatz
News

ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ “ರಾಜನಿವಾಸ” ..

ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರಿಂದ ಟ್ರೇಲರ್ ಅನಾವರಣ. ನಟ ಆದಿತ್ಯ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿ .

ಡಿ.ಪಿ.ಆಂಜನಪ್ಪ ನಿರ್ಮಿಸಿರುವ, ಲೋಕೇಶ್ ಗೌಡ ಅವರ ಸಹ ನಿರ್ಮಾಣವಿರುವ, ಮಿಥುನ್ ನಿರ್ದೇಶನದ ಹಾಗೂ ರಾಘವ್ ನಾಯಕ್, ಕೃತಿಕ ಅಭಿನಯದ ಮತ್ತು ಶ್ರೀನಗರ ಕಿಟ್ಟಿ ವಿಶೇಷಪಾತ್ರದಲ್ಲಿ ನಟಿಸಿರುವ ” ರಾಜನಿವಾಸ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಕ.ರ.ವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದರು. ನಟ ಆದಿತ್ಯ, ನಿರ್ಮಾಪಕರಾದ‌ ಉದಯ್ ಕೆ ಮೆಹ್ತಾ, ಸಂಜಯ್ ಗೌಡ, ವೀರಕಪುತ್ರ ಶ್ರೀನಿವಾಸ್, ರಾಬರ್ಟ್ ಕ್ರಿಸ್ಟೋಫರ್,‌ ರಮೇಶ್ ಗೌಡ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು “ರಾಜನಿವಾಸ” ಚಿತ್ರಕ್ಕೆ ಶುಭ ಹಾರೈಸಿದ್ದರು.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಕ.ರ.ವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರು, ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿ ಬಗ್ಗೆ ಕೇಳಿದಾಗ ಬಹಳ ಬೇಸರವಾಗುತ್ತದೆ. ಚಿತ್ರರಂಗದ ಹಿರಿಯರೊಡನೆ ನಾನು ಈ ಚಿತ್ರರಂಗದ ವಿಷಯಗಳನ್ನು ಮಾತನಾಡುತ್ತಿರುತ್ತೇನೆ.‌ ಹಿಂದೆ ರಾಜಕುಮಾರ್ ಅವರ ಜೊತೆಗೆ ಚಿತ್ರರಂಗದ ಪರವಾಗಿ ಸಾಕಷ್ಟು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಕನ್ನಡ ಚಿತ್ರರಂಗಕ್ಕಾಗಿ ದುಡಿದಿರುವ ಹಲವು ಹಿರಿಯ ಕಲಾವಿದರು ಹಾಗೂ ತಂತ್ರಜ್ಞರು ಇದ್ದಾರೆ. ಆ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ಗಣ್ಯರನ್ನು ಗೌರವಿಸಲು ಸದ್ಯದಲ್ಲೇ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಿದ್ದೇವೆ. ಬರೀ ಸ್ಮರಣಿಕೆ ಮಾತ್ರ ನೀಡದೆ, ಅದರ ಜೊತೆಗೆ ಒಂದು ಲಕ್ಷ ನಗದು ಸಹ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಈ ಕುರಿತು ಚಿತ್ರರಂಗದ ಹಿರಿಯರೊಂದಿಗೆ ಮಾತುಕತೆ ನಡೆಸಿದ್ದೇವೆ. ಇನ್ನೂ ಈ ಚಿತ್ರದ ನಿರ್ಮಾಪಕ ಆಂಜನಪ್ಪ ಅವರು ಬಹಳ ವರ್ಷಗಳಿಂದ ಕನ್ನಡಪರ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅವರ ನಿರ್ಮಾಣದ “ರಾಜನಿವಾಸ” ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.

“ರಾಜನಿವಾಸ” ಚಿತ್ರದ ಟ್ರೇಲರ್ ನೋಡಿದಾಗ ಕೆಲವರಿಗೆ “ಕಾಂತಾರ” ಚಿತ್ರ ನೆನಪಾಗಬಹುದು. ಆದರೆ ಇದು “ಕಾಂತಾರ” ಚಿತ್ರಕ್ಕೂ ಮೊದಲೇ ಆರಂಭವಾದ ಚಿತ್ರ. ಆದರೆ “ಕಾಂತಾರ’ ಮೊದಲು ಬಿಡುಗಡೆಯಾಯಿತು. ಆ ಚಿತ್ರವನ್ನು ನೋಡಿದ ನಂತರ ನಮ್ಮ ಚಿತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಈಗ ನಮ್ಮ ಚಿತ್ರ ತೆರಗೆ ಬರಲು ಸಿದ್ದವಾಗಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ನಾಲ್ಕು ಭಾಷೆಗಳ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಸದ್ಯದಲ್ಲೇ ಮೊದಲ ಹಾಡು ಸಹ ಅನಾವರಣವಾಗಲಿದೆ‌. ಚಿತ್ರ ಅಂದುಕೊಂಡ ಹಾಗೆ ಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಮಿಥುನ್.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ನಾರಾಯಣ ಗೌಡ ಅವರಿಗೆ ಹಾಗೂ ಆಗಮಿಸಿದ ಪ್ರತಿಯೊಬ್ಬ ಗಣ್ಯರಿಗೆ ಧನ್ಯವಾದ ಎಂದು ಮಾತು ಆರಂಭಿಸಿದ ನಿರ್ಮಾಪಕ ಆಂಜನಪ್ಪ, ನಮ್ಮ ಚಿತ್ರದ ಟ್ರೇಲರ್ ಗೆ ಸಿಗುತ್ತಿರುವ ಮೆಚ್ಚುಗೆಗೆ ಮನತುಂಬಿ ಬಂದಿದೆ. ಚಿತ್ರ ಚೆನ್ನಾಗಿ ಮೂಡಿಬರಲು ನಿರ್ದೇಶಕರು ಹಾಗೂ ಚಿತ್ರತಂಡದ ಶ್ರಮ ಬಹಳಷ್ಟಿದೆ. ಸಹ ನಿರ್ಮಾಪಕರಾದ ಲೋಕೇಶ್ ಗೌಡ ಅವರು ಸೇರಿದಂತೆ ಅನೇಕ ಸ್ನೇಹಿತರು ನನ್ನೊಂದಿಗಿದ್ದಾರೆ‌. ನಾನು ಸಹ ಕಲಾಮಂದಿರದ ವಿದ್ಯಾರ್ಥಿಯಾಗಿದ್ದೆ. ಅಲ್ಲಿದ್ದಾಗ ಸಾಕಷ್ಟು ಚಿತ್ರರಂಗದವರು ಪರಿಚಯವಾದರು. ನಮ್ಮ ಚಿತ್ರ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುವ ಭರವಸೆ ಇದೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಸಹ ನಿರ್ಮಾಪಕ ಲೋಕೇಶ್ ಗೌಡ ಅವರು ಸಹ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಾಯಕ ರಾಘವ ಹಾಗೂ ನಾಯಕಿ ಕೃತಿಕ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಲಾವಿದರಾದ ನೀನಾಸಂ ಅಶ್ವತ್, ಯಮುನ ಶ್ರೀನಿಧಿ, ಸಹನ ಹಾಗೂ ಸಂಗೀತ ನಿರ್ದೇಶಕ ವಿಜಯ್ ಯಾರ್ಡ್ಲಿ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related posts

ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್…‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ

Kannada Beatz

ಹೊರಬಿತ್ತು ಬಹುನಿರೀಕ್ಷಿತ, ಸಿನಿಮಾ ಅಭಿಮಾನಿಗಳು ಸೇರಿ ಆಡುವಂತಹ, ‘ಫ್ಯಾನ್ಸ್ ಕ್ರಿಕೆಟ್ ಲೀಗ್’ ಈ ಸಾಲಿನ ದಿನಾಂಕಗಳು

Kannada Beatz

ಸರಿದು ಹೋದ ‘ಸಂಚಾರಿ’ ನೆನಪಲ್ಲಿ ನೆಂದ ಚೆಂದದ ಕಾರ್ಯಕ್ರಮ…

administrator

Leave a Comment

Share via
Copy link