ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ನಟ ಪುನೀತ್ ರಾಜ್ಕುಮಾರ್ ಅವರು ವರ್ಷ ಕಳೆದ ಬಳಿಕ ಮತ್ತೆ ಬೆಳ್ಳಿ ತೆರೆಯ ಮೇಲೆ ರಾರಾಜಿಸಲು ನಟ ಸಾರ್ವಭೌಮ ಚಿತ್ರದ ಮೂಲಕ ಬರುತ್ತಿದ್ದಾರೆ.
ಹೌದು ಕಳೆದ ವರ್ಷ ಪುನೀತ್ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗದೆ ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ಇದೀಗ ವರ್ಷ ಕಳೆದ ಬಳಿಕ ನಟ ಸಾರ್ವಭೌಮ ಚಿತ್ರ ತೆರೆಗೆ ಬರುತ್ತಿದ್ದು ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಇನ್ನು ಚಿತ್ರದಲ್ಲಿ ಪುನೀತ್ ಅವರಿಗೆ ನಾಯಕಿಯರಾಗಿ ರಚಿತಾ ರಾಮ್ ಮತ್ತು ಅನುಪಮಾ ಪರಮೇಶ್ವರನ್ ಅವರು ಕಾಣಿಸಿಕೊಂಡಿದ್ದಾರೆ.
ರಣವಿಕ್ರಮ ನಂತರ ಮತ್ತೊಮ್ಮೆ ಪವನ್ ಒಡೆಯರ್ ಅವರು ನಟ ಪುನೀತ್ ರಾಜ್ಕುಮಾರ್ ಅವರಿಗೆ ನಿರ್ದೇಶನ ಮಾಡಿದ್ದು ಹಿಂದೆಂದೂ ಕಂಡಿರದ ಪುನೀತ್ ನಮಗೆ ಸಿಗಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ನಟ ಸಾರ್ವಭೌಮ ಚಿತ್ರದ ಹಾಡುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಅದರಲ್ಲಿಯೂ ಓಪನ್ ದ ಬಾಟಲ್ ಎಂಬ ಹಾಡನ್ನು ಹೊಸ ವರ್ಷದ ಪ್ರಯುಕ್ತ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೂ ಮುಂಚೆ ಬಿಡುಗಡೆ ಮಾಡಲಾಗಿತ್ತು. ಆ ಹಾಡು ಬಿಡುಗಡೆಯಾದ ದಿನವೇ ಜನರು ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಮತ್ತು ಸೂಪರ್ ಹಿಟ್ ಆಗಿ ಹೊರ ಹೊಮ್ಮಿತ್ತು.
ಇನ್ನು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಒಟ್ಟಾರೆಯಾಗಿ ನಾಲ್ಕು ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು ನಾಲ್ಕು ಹಾಡುಗಳು ಸಹ ಜನರಿಗೆ ಇಷ್ಟವಾಗಿ ಬಿಟ್ಟಿವೆ. ಓಪನ್ ದ ಬಾಟಲ್ ಈ ಹಾಡು ಪಾರ್ಟಿ ಸಾಂಗ್ ಹಾಕಿದ್ದು ಯುವಕರಿಗೆ ಸಖತ್ ಕಿಕ್ ನೀಡುತ್ತಿದೆ. ಹಾಗೆ ಡಾನ್ಸ್ ವಿಥ್ ಅಪ್ಪು ಹಾಡು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗಂತೂ ಹಬ್ಬ. ಹಾಗೆಯೇ ಶ್ರೇಯಾ ಘೋಷಾಲ್ ಅವರು ಹಾಡಿರುವ ಯಾರೋ ನಾನು ಹಾಡು ಸಹ ಮೆಲೋಡಿ ಲವರ್ಸ್ ಗೆ ಹೇಳಿ ಮಾಡಿಸಿದಂತಿದ್ದು ಕೇಳುಗರಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದೆ. ಹಾಗೆಯೇ ತಾಜಾ ಸಮಾಚಾರ ಹಾಡು ಕೂಡ ಜನರಿಗೆ ಇಷ್ಟವಾಗುತ್ತಿದ್ದು ಪದೇ ಪದೇ ಕೇಳುವ ರೀತಿ ಇದೆ.
ಒಟ್ಟಾರೆಯಾಗಿ ನಟ ಸಾರ್ವಭೌಮ ಚಿತ್ರದ ಆಡಿಯೋ ಆಲ್ಬಂ ಹಿಟ್ ಆಗಿದ್ದು ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಡಿ ಇಮಾನ್ ಕಂಪೋಸ್ ಮಾಡಿರುವ ಹಾಡುಗಳಿಗೆ ಜನ ಜೈ ಎಂದಿದ್ದಾರೆ.