HomeNewsಸನ್ಮಾನ್ಯ ಗೃಹ ಸಚಿವರಿಂದ "ಓಮಿನಿ" ಟ್ರೇಲರ್ ಬಿಡುಗಡೆ.

ಸನ್ಮಾನ್ಯ ಗೃಹ ಸಚಿವರಿಂದ “ಓಮಿನಿ” ಟ್ರೇಲರ್ ಬಿಡುಗಡೆ.

“ಓಮಿನಿ” ಕಾರು ಹೌದು. ಆದರೆ ಲ್ಯಾಟಿನ್ ಭಾಷೆಯಲ್ಲಿ “ಓಮಿನಿ” ಗೆ ಎಲ್ಲಾ ಎಂಬ ಅರ್ಥವಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ‌ಸಮಾರಂಭ ಅದ್ದೂರಿಯಾಗಿ ನಡೆಯಿತು. ಸನ್ಮಾನ್ಯ ಗೃಹಸಚಿವರಾದ ಅರಗ ಜ್ಞಾನೇಂದ್ರ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.


ತೀರ್ಥಹಳ್ಳಿ ಸುಂದರವಾದ ಊರು. ಅಲ್ಲಿನ ಗಾಳಿ, ನೀರಿಗೆ ಏನೋ ಅದ್ಭುತ ಶಕ್ತಿ ಇದೆ ಅನಿಸುತ್ತದೆ. ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರು ಸೇರಿದಂತೆ ಅನೇಕ ಗಣ್ಯರು ನಮ್ಮ ತಾಲ್ಲೂಕಿನವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಈ “ಓಮಿನಿ” ಚಿತ್ರದ ನಿರ್ದೇಶಕ ಮಂಜು ಕೂಡ ನಮ್ಮೂರಿನವರು. ಇವರೆಲ್ಲಾ ಬಂದು ನನ್ನನ್ನು ಸಮಾರಂಭಕ್ಕೆ ಆಹ್ವಾನಿಸಿದಾಗ ಬರಲ್ಲ ಎಂದು ಹೇಳಲು ಆಗಲಿಲ್ಲ. ಅವರೆಲ್ಲರ ಪ್ರೀತಿ ನನ್ನ ಇಲ್ಲಿಯವರೆಗೂ ಕರೆತಂದಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹಾರೈಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ರವಿಸಿಂಗ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

“ಓಮಿನಿ” ಎಂದರೆ ಲ್ಯಾಟಿನ್ ಭಾಷೆಯಲ್ಲಿ ಎಲ್ಲಾ ಎಂದು ಅರ್ಥ. ಆದರೆ “ಓಮಿನಿ” ಕಾರ್ ಸಹ ನಮ್ಮ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಆಗಸ್ಟ್ 19 ರಂದು ಚಿತ್ರ ತೆರೆಗೆ ಬರಲಿದೆ‌. ಇದು ನನ್ನ ಪಾಲಿಗೆ ಅತೀ ದೊಡ್ಡ ಸಮಾರಂಭ. ನಮ್ಮೂರಿನವರೇ ಆದ ಸನ್ಮಾನ್ಯ‌ ಗೃಹ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನನ್ನ ಬಾಯಲ್ಲಿ ಪದಗಳೇ ಹೊರಡುತ್ತಿಲ್ಲ.‌ ಗೃಹ ಸಚಿವರಿಗೆ ಎಷ್ಟು ಕಾರ್ಯದೊತ್ತಡ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಅಂತಹ ಬಿಡುವಿಲ್ಲದ ಕಾರ್ಯದೊತ್ತಡದ ನಡುವೆ ಈ ಕಾರ್ಯಕ್ರಮಕ್ಕೆ ಬಂದು ಹಾರೈಸಿರುವುದು ತುಂಬಾ ಸಂತೋಷವಾಗುತ್ತಿದೆ. ನಾನು ನಿರ್ದೇಶನದೊಂದಿಗೆ ಹಲವು ಜವಾಬ್ದಾರಿ ಹೊತ್ತುಕೊಂಡಿದ್ದೀನಿ. ಪ್ರಮುಖಪಾತ್ರದಲ್ಲೂ ಕಾಣಿಸಿಕೊಂಡಿದ್ದೀನಿ ಎಂದರು ನಿರ್ದೇಶಕ ಮಂಜು ಹೆದ್ದೂರ್.

ಇದೊಂದು ವಿಭಿನ್ನ ಕಥೆಯ ಚಿತ್ರ. ಚಿತ್ರವೊಂದರಲ್ಲಿ ಚಿತ್ರವನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಲವ್, ಸಸ್ಪೆನ್ಸ್, ಹಾರಾರ್ ಎಲ್ಲಾ‌ ಅಂಶಗಳು ನಮ್ಮ ಚಿತ್ರದಲ್ಲಿದೆ.‌ ನಮ್ಮ ಚಿತ್ರದಲ್ಲಿ “ಓಮಿನಿ” ಪ್ರಮುಖಪಾತ್ರ ವಹಿಸುತ್ತದೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ‌. ಅತೀ ದೊಡ್ಡದಾದ ದಾವಣಗೆರೆಯ ಗ್ಲಾಸ್ ಹೌಸ್ ನಲ್ಲಿ ಚಿತ್ರೀಕರಣವಾಗಿರುವುದು ವಿಶೇಷ. ಆಗಸ್ಟ್ 19 ರಂದು ರಾಜ್ಯಾದ್ಯಂತ “ಓಮಿನಿ” ಸಂಚಾರ ಆರಂಭವಾಗಲಿದೆ. ಇದು ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ನೋಡಿ. ಹಾರೈಸಿ ಎಂದರು ನಾಯಕ ಸಿದ್ದು ಮೂಲಿಮನಿ.

ಹಲವು ವರ್ಷಗಳ ನಂತರ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದೇನೆ. ಒಳ್ಳೆಯ ಪಾತ್ರ‌ ನೀಡಿದ್ದಾರೆ.‌ ನಾನು ಮಲೆನಾಡ ಹುಡುಗಿ. ಅದೇ ಊರಿನ ಹುಡುಗಿ ಪಾತ್ರ ಸಿಕ್ಕಿರುವುದು ಖುಷಿಯಾಗಿದೆ ಎಂದರು ನಾಯಕಿ ಅಶ್ವಿನಿ ಚಂದ್ರಶೇಖರ್.

ಗೀತರಚನೆಕಾರ ಪ್ರಮೋದ್ ಮರವಂತೆ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು “ಓಮಿನಿ” ಬಗ್ಗೆ ಮಾತನಾಡಿದರು.

ಶ್ರೀ ಬೆಳ್ಳುಡಿ ಫಿಲಂಸ್ ಹಾಗೂ ಎಸ್ ಆರ್ ಗ್ರೂಪ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮಂಜು ಹೆದ್ದೂರ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ನಿರ್ದೇಶನ ಹಾಗೂ ಎಂ.ಬಿ.ಅಳ್ಳಿಕಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸಿದ್ದು ಮೂಲಿಮನಿ, ಪೂಜಾ ಜನಾರ್ದನ, ಅಶ್ವಿನಿ ಚಂದ್ರಶೇಖರ್, ಭರತ್‌ ಬೋಪ್ಪಣ್ಣ, ಮಂಜು ಹೆದ್ದೂರ್, ಆಕಾಂಕ್ಷ ಪಟಮಕ್ಕಿ, ಮೋಹನ್ ಜುನೇಜ, ಪ್ರಕಾಶ್ ತುಮ್ಮಿನಾಡು, ಮನಸ್ವಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Must Read

spot_img
Share via
Copy link
Powered by Social Snap