HomeNewsಪೃಥ್ವಿ ಶಾಮನೂರು ಈಗ ಉತ್ತರ ಕರ್ನಾಟಕದ "ಉಡಾಳ" .

ಪೃಥ್ವಿ ಶಾಮನೂರು ಈಗ ಉತ್ತರ ಕರ್ನಾಟಕದ “ಉಡಾಳ” .

ಶೀರ್ಷಿಕೆ ಬಿಡುಗಡೆ ಮಾಡಿ ಶುಭ ಹಾರೈಸಿದ ಡಾಲಿ ಧನಂಜಯ .

ಎರಡು ವರ್ಷಗಳ ಹಿಂದೆ ” ಪದವಿಪೂರ್ವ ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾಮನೂರು ಅಭಿನಯದ ನೂತನ ಚಿತ್ರದ ಶೀರ್ಷಿಕೆಯನ್ನು ನಟ ರಾಕ್ಷಸ ಡಾಲಿ ಧನಂಜಯ ಬಿಡುಗಡೆ ಮಾಡಿದರು. ಈ ಚಿತ್ರಕ್ಕೆ “ಉಡಾಳ” ಎಂದು ಹೆಸರಿಡಲಾಗಿದೆ. ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ನಿರ್ಮಾಣದ ಈ ಚಿತ್ರವನ್ನು ಯೋಗರಾಜ್ ಭಟ್ ಅವರ ಶಿಷ್ಯ ಅಮೋಲ್ ಪಾಟೀಲ್ ನಿರ್ದೇಶನ ಮಾಡುತ್ತಿದ್ದಾರೆ. ಪೃಥ್ವಿ ಅವರಿಗೆ ನಾಯಕಿಯಾಗಿ ಹೃತಿಕ ಶ್ರೀನಿವಾಸ್ ಅಭಿನಯಿಸುತ್ತಿದ್ದಾರೆ.

ಮೊದಲು ಯೋಗರಾಜ್ ಭಟ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಮಾತನಾಡಿದ ಡಾಲಿ ಧನಂಜಯ, ಚಿತ್ರರಂಗಕ್ಕೆ ಯೋಗರಾಜ್ ಭಟ್ ಅವರ ಕೊಡುಗೆ ಅಪಾರ. ನಮ್ಮ ಸಂಸ್ಥೆಯ ಮೊದಲ ಚಿತ್ರ “ಬಡವ ರಾಸ್ಕಲ್” ಶೀರ್ಷಿಕೆ ಕೊಟ್ಟವರು ಅವರೆ. ಇನ್ನು ಪೃಥ್ವಿ ಶಾಮನೂರು ಒಳ್ಳೆಯ ಲವಲವಿಕೆ ಹುಡುಗ. ಅವನಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಈ ಚಿತ್ರದ ನಿರ್ದೇಶಕ ಅಮೋಲ್ ಪಾಟೀಲ್, ನನ್ನ ಜೊತೆಗೆ ಬಹಳ ಚಿತ್ರಗಳಿಗೆ ಕೆಲಸ ಮಾಡಿದ್ದಾನೆ. ಉತ್ತರ ಕರ್ನಾಟಕದ ವಿಜಾಪುರದ ಹುಡುಗ. ಚೆನ್ನಾಗಿ ಓದಿಕೊಂಡಿದ್ದಾನೆ. ಆತನಿಗೆ ಸಂಪೂರ್ಣ ಉತ್ತರ ಕರ್ನಾಟಕದ ಸೊಗಡಿನ ಚಿತ್ರ ಮಾಡಬೇಕೆಂಬ ಆಸೆ ಮೊದಲಿಂದಲೂ ಇತ್ತು. ಈಗ ಕಾಲ ಕೂಡಿ ಬಂದಿದೆ.‌ ಈ ಚಿತ್ರವನ್ನು ನಮ್ಮೊಟ್ಟಿಗೆ ನಿರ್ಮಾಣ ಮಾಡಲು ರವಿ ಶಾಮನೂರು ಮುಂದಾಗಿದ್ದಾರೆ. “ಉಡಾಳ” ಶೀರ್ಷಿಕೆ ಪೃಥ್ವಿ ಗೆ ನಿಜಕ್ಕೂ ಸರಿ ಹೊಂದುತ್ತದೆ ಎಂದು ಯೋಗರಾಜ್ ಭಟ್ ತಿಳಿಸಿದರು.

ನನಗೆ ಈ ಅವಕಾಶ ನೀಡಿರುವ ಗುರುಗಳಾದ ಯೋಗರಾಜ್ ಭಟ್ ಅವರಿಗೆ ಹಾಗೂ ರವಿ ಶಾಮನೂರು ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಮಾತು ಆರಂಭಿಸಿದ ನಿರ್ದೇಶಕ ಅಮೋಲ್ ಪಾಟೀಲ್, “ಉಡಾಳ” ಪಕ್ಕ ಉತ್ತರ ಕರ್ನಾಟಕದ ಶೈಲಿಯ ಚಿತ್ರ. ಈ ತಿಂಗಳ ಕೊನೆಗೆ ವಿಜಾಪುರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹೆಚ್ಚಿನ ಚಿತ್ರೀಕರಣ ಅಲ್ಲೇ ನಡೆಯಲಿದೆ. “ಉಡಾಳ” ನಾಗಿ ಪೃಥ್ವಿ ಶಾಮನೂರು ಅಭಿನಯಿಸುತ್ತಿದ್ದಾರೆ. ವಿಜಾಪುರದಲ್ಲಿ ಟೂರಿಸ್ಟ್ ಗೈಡ್ ಆಗಿ ಪಕ್ಯ ಎಂಬ ಪಾತ್ರದಲ್ಲಿ ಪೃಥ್ವಿ ಕಾಣಿಸಿಕೊಳ್ಳಲಿದ್ದಾರೆ. ಹೃತಿಕ ಶ್ರೀನಿವಾಸ್ “ಉಡಾಳ” ನ ನಾಯಕಿ. ಒಳ್ಳೆಯ ತಂಡ ನನ್ನೊಂದಿಗಿದೆ. “ಉಡಾಳ” ಎಲ್ಲರೂ ಮೆಚ್ಚುವ ಒಳ್ಳೆಯ ಚಿತ್ರವಾಗಲಿದೆ ಎಂದರು.

ನನ್ನ ಹಿಂದಿನ ಚಿತ್ರಕ್ಕೆ ನೀವು ನೀಡಿದ ಬೆಂಬಲಕ್ಕೆ ಚಿರ ಋಣಿ. ಶೀರ್ಷಿಕೆ ಅನಾವರಣ ಮಾಡಿಕೊಟ್ಟ ಧನಂಜಯ ಅವರಿಗೆ, ಅವಕಾಶ ನೀಡಿದ ಯೋಗರಾಜ್ ಸರ್, ನಿರ್ದೇಶಕರಿಗೆ ಹಾಗೂ ನನ್ನ ತಂದೆ ರವಿ ಶಾಮನೂರು ಅವರಿಗೆ ವಿಶೇಷ ಧನ್ಯವಾದ. ಈ ಚಿತದಲ್ಲಿ ನಂದು ಪಕ್ಕಾ “ಉಡಾಳ” ನ ಪಾತ್ರ ಎಂದು ನಾಯಕ ಪೃಥ್ವಿ ಶಾಮನೂರು ತಿಳಿಸಿದರು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕಿ ಹೃತಿಕ ಶ್ರೀನಿವಾಸ್.

ನಾನು ಯೋಗರಾಜ್ ಭಟ್ ಅವರ ಜೊತೆ ಸೇರಿ ನಿರ್ಮಿಸುತ್ತಿರುವ ಎರಡನೇಯ ಚಿತ್ರವಿದು. ಅವಕಾಶ ನೀಡಿದ ಯೋಗರಾಜ್ ಭಟ್ ಅವರಿಗೆ ಧನ್ಯವಾದ. ಮುಂದೆ ವರ್ಷಕ್ಕೆ ಒಂದು ಚಿತ್ರವನ್ನು ನಿರ್ಮಾಣ ಮಾಡುವ ಆಸೆ ಇದೆ ಎಂದರು ನಿರ್ಮಾಪಕ ರವಿ ಶಾಮನೂರು.

ಸಂಗೀತ ನಿರ್ದೇಶಕ ಚೇತನ್ ಹಾಗೂ ಛಾಯಾಗ್ರಾಹಕ ಶಿವಶಂಕರ್ ನೂರಂಬಡ “ಉಡಾಳ” ಚಿತ್ರದ ಕುರಿತು ಮಾತನಾಡಿದರು.

Must Read

spot_img
Share via
Copy link
Powered by Social Snap