ಎಲ್ಲ ಮಾತನ್ನು ಹೇಳಿದ ಮೋಹಕ ತಾರೆ..ವಿನಯ್ ಸರಳ ಪ್ರೇಮಕಥೆಗೆ ಸಾಥ್ ಕೊಟ್ಟ ರಮ್ಯಾ
ಸಿಂಪಲ್ ಸುನಿ ಸಾರಥ್ಯದ ಒಂದು ಸರಳ ಪ್ರೇಮಕಥೆ ಆಗಮನಕ್ಕೆ ದಿನಗಣೆಯಷ್ಟೇ ಬಾಕಿ ಇದೆ. ಫೆಬ್ರವರಿ 8ಕ್ಕೆ ತೆರೆಗೆ ಬರ್ತಿರುವ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗ್ತಿದೆ. ಕ್ಯಾರೆಕ್ಟರ್ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿರುವ ಸುನಿ ಈಗ ಒಂದೊಂದೇ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರಪ್ರೇಮಿಗಳಿಗೆ ಆಮಂತ್ರಣ ನೀಡುತ್ತಿದ್ದಾರೆ.
ಒಂದು ಸರಳ ಪ್ರೇಮಕಥೆ ಸಿನಿಮಾದ ಮತ್ತೊಂದು ಮೆಲೋಡಿ ಮಸ್ತಿ ಅನಾವರಣಗೊಂಡಿದೆ. ಸೂಫಿ ಶೈಲಿ ಸರಳ ಗೀತೆಯನ್ನು ಮೋಹಕ ತಾರೆ ರಮ್ಯಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಎಲ್ಲಾ ಮಾತನ್ನು ಎಂಬ ಹಾಡಿಗೆ
ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತ ಒದಗಿಸುವುದರ ಜೊತೆಗೆ ಶಿವಾನಿ ಸ್ವಾಮಿ ಜೊತೆಗೂಡಿ ಧ್ವನಿಯಾಗಿದ್ದಾರೆ. ದೊಡ್ಮನೆ ಕುವರ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ಮಲ್ಲಿಕಾ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ವಿನಯ್ ರಾಜ್ ಕುಮಾರ್ ಆತಿಷಯ ಎಂಬ ಪಾತ್ರದಲ್ಲಿ ನಟಿಸಿದ್ದು, ಅವರಿಗೆ ಜೋಡಿಯಾಗಿ
ಮಲ್ಲಿಕಾ ಸಿಂಗ್ ಹಾಗೂ ಸ್ವಾತಿಷ್ಠಾ ಕೃಷ್ಣನ್ ಅಭಿನಯಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಧುಕೋಕಿಲಾ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಸರಳ ಪ್ರೇಮಕಥೆಗೆ ಮೈಸೂರು ರಮೇಶ್ ನಿರ್ಮಾಣ ಹಣ ಹಾಕಿದ್ದಾರೆ. ಒಂದು ಸರಳ ಪ್ರೇಮಕಥೆಗೆ ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ.