ನಟ ಪುನೀತ್ ರಾಜ್ ಕುಮಾರ್ ಯಾವುದೇ ಹೊಸಬರ ತಂಡ ಸಿನಿಮಾ ಮಾಡಬೇಕೆಂದು ಮುಂದೆ ಬಂದರೂ ಅವರಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮನ್ನಗಲಿ ವರ್ಷವೇ ಆದರೂ ಸಾಕಷ್ಟು ಜನ ಅವರಿಂದಾದ ಘನಕಾರ್ಯಗಳನ್ನು ಸ್ಮರಿಸಿಕೊಂಡು ಬರುತ್ತಿದ್ದಾರೆ. ಈಗ “ಓ” ಎಂಬ ಹಾರರ್ ಚಿತ್ರತಂಡಕ್ಕೂ ಪುನೀತ್ ಹಾಡುವ ಮೂಲಕ ಸಾಥ್ ನೀಡಿರುವುದು ಬಹಿರಂಗವಾಗಿದೆ.
ವಾಮಾಚಾರದ ಜೊತೆಗೆ ಹಾರರ್ ಕಂಟೆಂಟ್ ಒಳಗೊಂಡಿರುವ “ಓ” ಚಿತ್ರದಲ್ಲಿ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಅಕ್ಕ ತಂಗಿಯರಾಗಿ ನಟಿಸಿದ್ದಾರೆ. ವಿಭಿನ್ನ ಪ್ರೇಮಕಥಾಹಂದರ ಇರುವ ಈ ಹಾರರ್, ಥ್ರಿಲ್ಲರ್ ಜಾನರ್ ಚಿತ್ರಕ್ಕೆ ಮಹೇಶ್ ಸಿ.ಅಮ್ಮಲ್ಲಿದೊಡ್ಡಿ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ವೈರಲ್ ಅಗಿತ್ತು. ಈಗ ಪುನೀತ್ ರಾಜ್ ಕುಮಾರ್ ಅವರು ಹಾಡಿರುವ ಏನೋ ಆಗಿದೆ, ಜಾದೂ ಆಗಿದೆ ಎಂಬ ಹಾಡಿನ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆಯಿತು. ಭರ್ಜರಿ ಚೇತನ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.

ಕಿರಣ್ ತಲಕಾಡು ಚಿತ್ರದ ಕಥೆ ಬರೆದು ಏಕಾಕ್ಷರ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್ ಸಿ.ಅಮ್ಮಲ್ಲಿದೊಡ್ಡಿ
ಇದು ಹಾರರ್ ಛಾಯೆಯ ಚಿತ್ರವೇ ಆದರೂ ಹೊಸತನದ ನಿರೂಪಣೆಯಿದೆ. ಈ ಹಾಡನ್ನು ಅಪ್ಪು ಅವರ ಕೈಲೇ ಹಾಡಿಸಬೇಕೆಂದು ಅವರ ಮ್ಯಾನೇಜರ್ ಸಂಪರ್ಕಿಸಿದಾಗ ನಮ್ಮ ಬಜೆಟ್ ಗೆ ಅವರು ಒಪ್ಪದೆ, ನಿಮ್ಮಂಥವರು ನೂರಾರು ಜನ ಬರ್ತಾರೆ. ಇಷ್ಟಾದರೆ ಹಾಡುತ್ತಾರೆ ಎಂದುಹೇಳಿ ಕಳಿಸಿದರು. ನಂತರ ನಾವು ನೇರವಾಗಿ ಪುನೀತ್ ಅವರನ್ನೇ ಅಪ್ರೋಚ್ ಮಾಡಿ ಹಾಡಿನ ವಿಶೇಷತೆ ಕುರಿತು ಹೇಳಿದಾಗ ಆವರು ನಾನು ಖಂಡಿತ ಇದನ್ನು ಹಾಡುತ್ತೇನೆ. ಚಿಂತೆ ಮಾಡಬೇಡಿ ಎಂದು ಹೇಳಿಕಳಿಸಿದರು. ಅಲ್ಲದೆ ಸಾಂಗ್ ರೆಕಾರ್ಡಿಂಗ್ ಸಮಯದಲ್ಲಿ ಹಾಡಿನ ಬಿಡುಗಡೆ ಸಮಯದಲ್ಲಿ ನನಗೆ ಇನ್ ಫಾರ್ಮ್ ಮಾಡಿ ಬರುತ್ತೇನೆ ಅಂತಲೂ ಹೇಳಿದ್ದರು. ಒಂದು ಮನೆಯಲ್ಲಿ ಅಕ್ಕ ತಂಗಿಯರ ನಡೆಯುವ ಕಥೆ ಇದಾಗಿದ್ದು, ಚಿತ್ರದಲ್ಲಿ ವಾಮಾಚಾರ ಮಾಡುವುದು ತಪ್ಪು ಎಂದು ತೋರಿಸಿದ್ದೇವೆ. ಚಿತ್ರವೀಗ ಸೆನ್ಸಾರ್ ಮುಗಿಸಿದ್ದು, ನ.೧೧ಕ್ಕೆ ಬಿಡುಗಡೆಯಾಗುತ್ತಿದೆ ಎಂಬ ಮಾಹಿತಿ ಹಂಚಿಕೊಂಡರು.

ನಂತರ ನಿರ್ಮಾಪಕ ಕಿರಣ್ ತಲಕಾಡು ಮಾತನಾಡುತ್ತ ಈ ಹಾಡನ್ನು ಪುನೀತ್ ರಾಜ್ ಕುಮಾರ್ ಅವರಿಂದಲೇ ಹಾಡಿಸಬೇಕೆಂದು ಕಾದಿದ್ದು ಹಾಡಿಸಿದೆವು. ಹಾಡಿನ ಬಿಡುಗಡೆಗೆ ಅವರೇ ಬರಬೇಕಿತ್ತು. ಏಕಾಕ್ಷರ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮಾಡಿದ್ದೇವೆ. ಚಿತ್ರ ಅದ್ಭುತ ಅನುಭವ ನೀಡುತ್ತದೆ. ಜನರಿಗೆ ಖಂಡಿತ ಇಷ್ಟವಾಗುತ್ತದೆ. ಸೆನ್ಸಾರ್ ಮಂಡಳಿಯವರು ಸಹ ಸಿನಿಮಾ ನೋಡಿ ಚಿತ್ರ ಚೆನ್ನಾಗಿ ಬಂದಿದೆಯೆದು ಹೇಳಿದ್ದಾರೆ ಚಿತ್ರವನ್ನು ಜನರಿಗೆ ಯಾವರೀತಿ ತಲುಪಿಸಬೇಕೆಂದು ಸಾಕಷ್ಟು
ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಮುಖ್ಯವಾಗಿ ಈ ಚಿತ್ರದಿಂದ ಬರುವ ಲಾಭದಲ್ಲಿ ಸರ್ಕಾರಿ ಶಾಲೆಯನ್ನು ಅಭಿವೃದ್ದಿಪಡಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ನಾಯಕಿಯರಲ್ಲೊಬ್ಬರಾದ ಅಮೃತಾ ಅಯ್ಯಂಗಾರ್ ಮಾತನಾಡಿ ನಾನು ಚಿಕ್ಕವಳಿದ್ದಾಗಿನಿಂದಲೂ ಅಪ್ಪು ಅವರ ಅಭಿಮಾನಿ. ಅವರನ್ನು ನಾವೆಲ್ಲ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಈ ಚಿತ್ರದಲ್ಲಿ ಹಾರರ್ ಎಫೆಕ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನೂ ಎಲ್ಲಾ ಥರದ ಎಮೋಷನ್ ಇರೋ ಪಾತ್ರವನ್ನು ಮಾಡಿದ್ದೇನೆ. ಮಾ. ಆಲಾಪ್ ನನ್ನ ತಮ್ಮನಾಗಿ ಅಭಿನಯಿಸಿದ್ದಾನೆ ಎಂದರು. ನಾಯಕ ಸಿದ್ದು ಮೂಲಿಮನಿ ಮಾತನಾಡಿ ನನ್ನ ತಾಯಿ ಪುನೀತ್ ಅವರ ದೊಡ್ಡ ಅಭಿಮಾನಿ. ಇಂದು ಅವರೂ ಸಹ ಬಂದಿದ್ದಾರೆ. ನಾನು ಅಭಿನಯಿಸಿದ ಮೊದಲ ಚಿತ್ರ ಎಂದು ಹೇಳಿಕೊಂಡರು. ಮುಖ್ಯ ಅತಿಥಿಯಾಗಿದ್ದ ಚೇತನ್ ಕುಮಾರ್ ಮಾತನಾಡಿ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಹೇಳಿದರು. ಚಿತ್ರದಲ್ಲಿ ನಾಯಕಿಯರ ತಾಯಿಯಾಗಿ ಹಿರಿಯನಟಿ ಸಂಗೀತಾ ನಟಿಸಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿ ದಿಲೀಪ್ ಚಕ್ರವರ್ತಿ, ಸಂಗೀತ ನಿರ್ದೇಶಕರಾಗಿ ಕಿರಣ್ ರವೀಂದ್ರನಾಥ್ ಕೆಲಸ ಮಾಡಿದ್ದಾರೆ. ಸತೀಶ್ ಬಾಬು ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಉಗ್ರಂ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಅವರ ಸಂಕಲನ ಚಿತ್ರದಲ್ಲಿದೆ.

