ಟ್ರೇಲರ್ ನಲ್ಲಿ ‘ಮರ್ಫಿ’..ಪ್ರಭು ಮುಂಡ್ಕೂರ್ ಸಿನಿಮಾಗೆ ಸಾಥ್ ಕೊಟ್ಟ 9 ನಟಿಮಣಿಯರು
ಪ್ರಾಮಿಸಿಂಗ್ ಆಗಿದೆ ಮರ್ಫಿ ಟ್ರೇಲರ್.. ಪ್ರಭು ಮುಂಡ್ಕೂರ್ ಸಿನಿಮಾ ಅಕ್ಟೋಬರ್ 18ಕ್ಕೆ ರಿಲೀಸ್
ಆರಂಭದಿಂದಲೂ ರೋಮಾಂಚಕ ವಾತಾವರಣ ಸೃಷ್ಟಿಸಿಕೊಂಡು ಬಂದಿರುವ ಸಿನಿಮಾ ಮರ್ಫಿ. ಮನಮೋಹಕ ಹಾಡುಗಳು ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿರುವ ಚಿತ್ರತಂಡವೀಗ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚು ಮಾಡಿದೆ. ಬೆಂಗಳೂರಿನ ಒರಿಯನ್ ಮಾಲ್ ನಲ್ಲಿ ಮರ್ಫಿ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಮರ್ಫಿ ಟ್ರೇಲರ್ ಲಾಂಚ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಚಿತ್ರರಂಗದ 9 ನಟಿಮಣಿಯರು. ನವರಾತ್ರಿ ಹಬ್ಬದ ಸುಂದರ್ಭದಲ್ಲಿ ಚಿತ್ರತಂಡ ಸ್ಯಾಂಡಲ್ ವುಡ್ ನ 9 ಬ್ಯೂಟಿಗಳಾದ ಪ್ರಿಯಾಂಕ ಉಪೇಂದ್ರ, ಅಮೃತಾ ಅಯ್ಯಂಗಾರ್, ರಾಗಿಣಿ ದ್ವಿವೇದಿ, ಖುಷಿ ರವಿ, ಮೇಘನ ಗಾಂವಕರ್, ಸಪ್ತಮಿ ಗೌಡ, ಧನ್ಯ ರಾಮ್ ಕುಮಾರ್, ರೀಶ್ಮಾ ನಾಣಯ್ಯ, ಅಂಕಿತ ಅಮರ್ ಟ್ರೈಲರ್ ಲಾಂಚ್ ಮಾಡಿಸಿದೆ. ಈ ಎಲ್ಲಾ ನಾಯಕ ನಟಿಯರು ಮರ್ಫಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.
ಟ್ರೇಲರ್ ಬಿಡುಗಡೆ ಬಳಿಕ ನಾಯಕ ಪ್ರಭು ಮುಂಡ್ಕೂರ್ ವರ್ಮಾ ಮಾತನಾಡಿ, ಕೆಲವೊಮ್ಮೆ ನಟರಿಗೆ ಒಂದು ಕಥೆ ಕಾಡುತ್ತಿರುತ್ತದೆ. ಈ ರೀತಿ ಕಥೆ ಮಾಡಬೇಕು ಅನಿಸುತ್ತದೆ. ಮರ್ಫಿ ಕಥೆ ಕೂಡ ನನ್ನ ತುಂಬಾ ಕಾಡಿತ್ತು. ಈ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದೇವೆ. ನಾನು ತುಂಬಾ ಸಿನಿಮಾದಲ್ಲಿ ನಟಿಸಿದ್ದೇನೆ. ಈ ರೀತಿ ಅವಕಾಶ ಸಿಗುತ್ತದೆ, 9 ನಟಿಯರು ನನ್ನ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಮರ್ಫಿ ಜನರಿಗೆ ಸಿನಿಮ್ಯಾಟಿಕ್ ಫೀಲ್ ಕೊಡುತ್ತದೆ, ಇದಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ. ಅದ್ಭುತ ಟೆಕ್ನಿಕಲ್ ಟೀಂ ನಮ್ಮ ಚಿತ್ರಕ್ಕಾಗಿ ದುಡಿದಿದೆ. ಪ್ರತಿಯೊಬ್ಬರು ಈ ಸಿನಿಮಾ ನೋಡಿ ಬೆಂಬಲಿಸಿ ಎಂದರು.
ನಿರ್ದೇಶಕರಾದ BSP ವರ್ಮಾ ಮಾತನಾಡಿ, ಅದ್ಭುತ ತಂಡದ ಜೊತೆ ಕೆಲಸ ಮಾಡಿದ ಖುಷಿ ನನ್ನಲ್ಲಿದೆ. ಇದೇ 18ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ನಿಮ್ಮ ಆಶೀರ್ವಾದ ನಮ್ಮ ಚಿತ್ರದ ಮೇಲೆ ಇರಲಿ ಎಂದರು.
ಮರ್ಫಿ ಟ್ರೇಲರ್ ಬಹಳ ಪ್ರಾಮಿಸಿಂಗ್ ಆಗಿದೆ. ಪ್ರೀತಿ ಭಾವನೆ, ನೆನಪುಗಳ ಸುತ್ತಾ ಸಾಗುವ ರೋಮ್ಯಾಟಿಂಕ್ ಪ್ರೇಮಕಥಾಹಂದರಕ್ಕೆ BSP ವರ್ಮಾ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪ್ರಭು ಮುಂಡ್ಕೂರ್ ವರ್ಮಾ ಚಿತ್ರಕಥೆ ಬರೆಯುವುದರ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ರೋಶಿನಿ ಪ್ರಕಾಶ್ , ಇಳಾ ವೀರಮಲ್ಲ ಜೊತೆಯಲ್ಲಿ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ್, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಸಂಕಲನ, ಆದರ್ಶ ಆರ್ ಕ್ಯಾಮೆರಾ ಹಿಡಿದ್ದಾರೆ.
ಸೋಮಣ್ಣ ಟಾಕೀಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್ ನಡಿ ರಾಮ್ ಕೋ ಸೋಮಣ್ಣ ಹಾಗೂ ಬಿಎಸ್ ಪಿ ವರ್ಮಾ ಮರ್ಫಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಮರ್ಫಿಯಲ್ಲಿ ಏಳು ಹಾಡುಗಳಿದ್ದು, ಅರ್ಜುನ್ ಜನ್ಯ, ರಜತ್ ಹೆಗ್ಡೆ, ಕೀರ್ತನ್ ಹೊಳ್ಳ ಮತ್ತು ಸಿಲ್ವೆಸ್ಟರ್ ಪ್ರದೀಪ್ ಸಂಗೀತ ನಿರ್ದೇಶನ ಮಾಡಿದ್ದು, ಸಿಲ್ವೆಸ್ಟರ್ ಪ್ರದೀಪ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಇಡೀ ಕುಟುಂಬ ಸಮೇತರಾಗಿ ನೋಡುವಂತಹ ಚಿತ್ರವಾಗಿರುವ ಮರ್ಫಿ ಸಿನಿಮಾ ಅಕ್ಟೋಬರ್ 18ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಡಾಲಿ ಧನಂಜಯ್, ಪನ್ನಗಭರಣ ಚಿತ್ರ ನೋಡಿ ಇಷ್ಟಪಟ್ಟಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಕ್ಷಿತಾ ಪ್ರೇಮ್, ನಿರ್ದೇಶಕ ಹೇಮಂತ್ ಎಂ ರಾವ್ ಮತ್ತು ರಾಜ್ ಬಿ ಶೆಟ್ಟಿ ಮರ್ಫಿ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.