ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಹಾಗೂ ಟೈಗರ್ ಟಾಕೀಸ್ ಮೂಲಕ ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿರುವ “ಲಂಕಾಸುರ” ಚಿತ್ರಕ್ಕಾಗಿ “ಬಹದ್ದೂರ್” ಚೇತನ್ ಕುಮಾರ್ ಬರೆದಿರುವ “ಮಾಡರ್ನ್ ಮಹಾಲಕ್ಷ್ಮಿ” ಹಾಡನ್ನು ಖ್ಯಾತ ನಟಿ ಮಾಲಾಶ್ರೀ ಬಿಡುಗಡೆ ಮಾಡಿದ್ದಾರೆ. A2 music ಮೂಲಕ ಈ ಹಾಡು ಬಿಡುಗಡೆಯಾಗಿದೆ. ಇತ್ತೀಚಿಗೆ ಅದ್ದೂರಿಯಾಗಿ ನಡೆದ ಈ ಹಾಡು ಬಿಡುಗಡೆ ಸಮಾರಂಭದಲ್ಲಿ ಹಿರಿಯ ನಟಿ ಶೃತಿ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ.ಜಿ.ರಾಮಮೂರ್ತಿ, ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.
ನಾನು ವಿನೋದ್ ಪ್ರಭಾಕರ್ ಅವರ ದೊಡ್ಡ ಅಭಿಮಾನಿ. ಅವರು ಮಾಡುವ ಸಾಹಸ ಸನ್ನಿವೇಶಗಳು ನನಗೆ ತುಂಬಾ ಇಷ್ಟ. ಟೈಗರ್ ಟಾಕೀಸ್ ಮೂಲಕ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಮಾಲಾಶ್ರೀ ಹಾರೈಸಿದರು.
ನಾನು ಪ್ರಭಾಕರ್ ಅವರ ಜೊತೆ ನಟಿಸಿದ್ದೆ. ಈಗ “ಮಾದೇಶ” ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಜೊತೆ ನಟಿಸಿದ್ದೇನೆ. “ಲಂಕಾಸುರ” ಚಿತ್ರದ ಮೂಲಕ ವಿನೋದ್ ಹಾಗೂ ನಿಶಾ ನಿರ್ಮಾಪಕರು ಆಗಿದ್ದಾರೆ ಒಳ್ಳೆಯದಾಗಲಿ ಎಂದರು ನಟಿ ಶೃತಿ.
ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ.ಜಿ.ರಾಮಮೂರ್ತಿ ಸೇರಿದಂತೆ ಅನೇಕ ಗಣ್ಯರು ತಮ್ಮ ಮಾತುಗಳ ಮೂಲಕ ಶುಭ ಕೋರಿದರು.
ಇಡೀ ಚಿತ್ರತಂದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ನೋಡಿ ಹಾರೈಸಿ ಎಂದರು ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್.
ಕೊರೋನ ಬರುವ ಮುಂಚೆ ರಾಘವ ಮುನಿಸ್ವಾಮಿ ಅವರು ನನಗೆ ಅಡ್ವಾನ್ಸ್ ನೀಡಿ “ಲಂಕಾಸುರ” ಚಿತ್ರ ಆರಂಭಿಸಿದ್ದರು. ಆನಂತರ ಕಾರಣಾಂತರದಿಂದ ನಾವೇ ಟೈಗರ್ ಟಾಕೀಸ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೆವು. ಟೀಸರ್ ಬಿಡುಗಡೆ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ, ಲೋಗೊ ಅನಾವರಣ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾನು ಆಭಾರಿ. ನನ್ನ ಇಡೀ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ. ಎಲ್ಲರೂ ಇಷ್ಟಪಡುವ ಚಿತ್ರ ಮಾಡಿದ್ದೇವೆ. ನೋಡಿ ಪ್ರೋತ್ಸಾಹ ನೀಡಿ ಎಂದರು ನಾಯಕ ವಿನೋದ್ ಪ್ರಭಾಕರ್.
ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಎಲ್ಲಾ ಹಾಡುಗಳನ್ನು ಚೇತನ್ ಕುಮಾರ್ ಬರೆದಿದ್ದಾರೆ. “ಮಾರ್ಡನ್ ಮಹಾಲಕ್ಷ್ಮಿ” ಹಾಡನ್ನು ನಾನೇ ಹಾಡಿದ್ದೇನೆ ಎಂದು ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹೇಳಿದರು.
ನಿರ್ದೇಶಕ ಪ್ರಮೋದ್ ಕುಮಾರ್, ಛಾಯಾಗ್ರಾಹಕ ಸುಜ್ಞಾನ್, ನೃತ್ಯ ನಿರ್ದೇಶಕ ಭಜರಂಗಿ ಮೋಹನ್ ಮುಂತಾದವರು “ಲಂಕಾಸುರ” ಚಿತ್ರದ ಕುರಿತು ಮಾತನಾಡಿದರು.