ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಧನುಷ್ ಹಾಗೂ ಫಾಲ್ಗುಣಿ ಖನ್ನ ನಾಯಕ – ನಾಯಕಿ .
“ನಾನು ಮತ್ತು ಗುಂಡ” ಖ್ಯಾತಿಯ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ, ಮಾವಿನಮರ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಧನುಷ್ – ಫಾಲ್ಗುಣಿ ಖನ್ನ ನಾಯಕ – ನಾಯಕಿಯಾಗಿ ನಟಿಸುತ್ತಿರುವ “ಕೊನಾರ್ಕ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಾಗರಭಾವಿಯ ಶ್ರೀದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಆರಂಭವಾಯಿತು. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಆರಂಭ ಫಲಕ ತೋರಿ “ಕೊನಾರ್ಕ್” ಚಿತ್ರಕ್ಕೆ ಚಾಲನೆ ನೀಡಿದರು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

“ಕೊನಾರ್ಕ್” ಚಿತ್ರದ ಕಥೆ ಸಿದ್ದವಾಗಲು ಎರಡು ವರ್ಷಗಳ ಕಾಲ ಬೇಕಾಯಿತು ಎಂದು ಮಾತನಾಡಿದ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ, “ಕೊನಾರ್ಕ್” ಎಂದರೆ ಸೂರ್ಯನಿಂದ ಭೂಮಿಗೆ ಬೀಳುವ ಬೆಳಕು. ನಮ್ಮ ಚಿತ್ರದ ಕಥೆಗೆ ಸೂಕ್ತ ಶೀರ್ಷಿಕೆ ಇದು. ಇನ್ನೂ ಧನುಷ್ ಈ ಚಿತ್ರದ ನಾಯಕನಾಗಿ, ಫಾಲ್ಗುಣಿ ಖನ್ನ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಭಿಜಿತ್, ಹ್ಯಾರಿ ಜೋಶ್, ಸುಧಾರಾಣಿ, ರಮೇಶ್ ಇಂದಿರಾ, ಬಿ.ಸುರೇಶ್, ರಾಜ್ ದೀಪಕ್ ಶೆಟ್ಟಿ, ಯಶ್ ಶೆಟ್ಟಿ ಮುಂತಾದವರ ದೊಡ್ಡ ತಾರಾಬಳಗವಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಾನೇ ಬರೆದಿದ್ದೇನೆ. ಶ್ಯಾಮ್ ಸಿ ಎಸ್ ಸಂಗೀತ ನಿರ್ದೇಶನ, ಸಂಕೇತ್ ಮೈಸೂರು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಡಾ||ರವಿವರ್ಮ, ಅರ್ಜುನ್, ಚೇತನ್ ಡಿಸೋಜ, ವಿನೋದ್, ವಿಕ್ರಮ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಮೊಯಿನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. “ಕೊನಾರ್ಕ್” ಚಿತ್ರದ ಮೊದಲ ಹಂತದ ಚಿತ್ರೀಕರಣ ಅಕ್ಟೋಬರ್ ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿದೆ. ಆನಂತರ ಮುಂಬೈ, ಗೋವಾ, ಕಾರವಾರ, ಹೊನ್ನಾವರ, ಬೆಂಗಳೂರು, ಮೈಸೂರಿನಲ್ಲಿ ನಡೆಯಲಿದೆ. ಮಾವಿನಮರ ಫಿಲಂಸ್ ಮೂಲಕ ಕೆಲವು ಸ್ನೇಹಿತರು ಸೇರಿ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಾನು ಹಾಗೂ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಅವರು ಆರು ವರ್ಷಗಳ ಸ್ನೇಹಿತರು. “ನಾನು ಮತ್ತು ಗುಂಡ” ಚಿತ್ರದ ಸಮಯದಲ್ಲಿ ಅವರ ಕಾರ್ಯವೈಖರಿ ನೋಡಿದ ನನಗೆ, ಅವರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಈಗ ಕಾಲ ಕೂಡಿ ಬಂದಿದೆ. ಕೊನಾರ್ಕ್ ಚಿತ್ರದ ಕಥೆ ಬಹಳ ಚೆನ್ನಾಗಿದೆ ಎಂದರು ನಾಯಕ ಧನುಷ್.
ನಾನು ಮೂಲತಃ ದೆಹಲಿಯವಳು. ಈಗ ಮುಂಬೈ ನಿವಾಸಿ. ತೆಲುಗಿನಲ್ಲಿ ಈಗಾಗಲೇ ಚಿತ್ರವೊಂದರಲ್ಲಿ ನಟಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ ಎಂದು ನಾಯಕಿ ಫಾಲ್ಗುಣಿ ಖನ್ನ ತಿಳಿಸಿದರು.
ಶ್ರೀನಿವಾಸ್ ತಿಮ್ಮಯ್ಯ ಅವರು ಕಥೆ ಹೇಳುವ ರೀತಿಯೇ ಬಹಳ ಅದ್ಭುತ. ಅವರು ಈ ಚಿತ್ರದ ಕಥೆ ಹೇಳಿದ ಕೂಡಲೆ ನಾನು ಚಿತ್ರದಲ್ಲಿ ನಟಿಸಬೇಕೆಂದು ನಿರ್ಧರಿಸಿದೆ ಎಂದು ಹಿರಿಯ ನಟ ಅಭಿಜಿತ್ ಹೇಳಿದರು.
“ಕೊನಾರ್ಕ್” ಚಿತ್ರದ ಅನೇಕ ಕಲಾವಿದರು, ತಂತ್ರಜ್ಞರು ಹಾಗೂ ನಿರ್ಮಾಪಕ ಮದನ್ ಕುಮಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
