ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗಂಗಾಧರ್ (ಗಂಗು) ತಮ್ಮ ಸ್ನೇಹಿತರಾದ ರಾಮಲಿಂಗಂ ಹಾಗೂ ಶ್ಯಾಮ್ ಅವರ ಜೊತೆ ಸೇರಿ ನಿರ್ಮಿಸಿರುವ ” ಹತ್ಯ” ಚಿತ್ರದ ಟೀಸರ್ ಹಾಗೂ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಉದ್ಯಮಿ ನಾಗಿ ರೆಡ್ಡಿ ಟೀಸರ್ ಬಿಡುಗಡೆ ಮಾಡಿದರು.
ನಾನು ನಿರ್ಮಾಣ ನಿರ್ವಾಹಕನಾಗಿ ಎಲ್ಲರಿಗೂ ಚಿರಪರಿಚಿತ. ರಮೇಶ್ ಅರವಿಂದ್ ಅಭಿನಯದ “ತುಂತುರು”, ” ನೀರು” ಸೇರಿದಂತೆ ಕೆಲವು ಚಿತ್ರಗಳಿಗೆ ಕಥೆ ಹಾಗೂ ಚಿತ್ರಕಥೆ ಸಹ ಬರೆದಿದ್ದೇನೆ. “ಹತ್ಯ” ಸಿನಿಮಾವನ್ನು ನನ್ನ ಮಗ ವರುಣ್ ಹೆಸರಿನಲ್ಲಿ ನಾನೇ ನಿರ್ದೇಶನ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ದೇಶದ ವಿವಿಧ ಕಡೆ ನಡೆದಿರುವ ಭಯಂಕರ ಕ್ರೈಮ್ ಗಳನ್ನು ಆಧರಿಸಿ ಈ ಚಿತ್ರದ ಕಥೆ ಬರೆದಿದ್ದೇನೆ. ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ “ಉತ್ಕರ್ಷ”, “ನಿಷ್ಕರ್ಷ” ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ಮಾಣ ನಿರ್ವಹಣೆ ಮಾಡಿದ್ದೇನೆ. ಹತ್ತಿರದಿಂದ ಅವರ ನಿರ್ದೇಶನ ನೋಡಿದ್ದೇನೆ. ನಾನು ನಿರ್ದೇಶಕನಾಗಲು ಅವರೆ ಸ್ಪೂರ್ತಿ. ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಬಹುತೇಕ ಇದೇ ತಿಂಗಳ ಕೊನೆಗೆ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಚಿತ್ರದ ಕುರಿತು ಗಂಗಾಧರ್ ಮಾಹಿತಿ ನೀಡಿದರು.
ನಾನು ಮೂಲತಃ ಪಂಜಾಬಿ. ಈಗ ಮುಂಬೈನಲ್ಲಿದ್ದೇನೆ. ಕಥೆ ಇಷ್ಟವಾಯಿತು. ಹಾಗಾಗಿ ಚಿತ್ರದಲ್ಲಿ ನಟಿಸಿದ್ದೇನೆ. ಇದು ನನ್ನ ಮೊದಲನೇ ಚಿತ್ರ ಎಂದರು ನಾಯಕಿ ಕೊಮಿಕಾ ಆಂಚಲ್.
ನಾಯಕ ವಿಕಾಸ್ ಗೌಡ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಸಂತೋಷ್ ಮೇದಪ್ಪ, ಸೋಮನ್ , ವರುಣ್ ಮುಂತಾದವರು ತಮ್ಮ ಪಾತ್ರದ ಬಗ್ಗೆ ಹಾಗೂ ಅಲೆನ್ ಅವರು ಸಂಗೀತದ ಕುರಿತು ಹಾಗೂ ಛಾಯಾಗ್ರಹಕ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣದ ಬಗ್ಗೆ ಮಾತನಾಡಿದರು. ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಚಿತ್ರತಂಡಕ್ಕೆ ಶುಭ ಕೋರಿದರು.