Kannada Beatz
News

ಟಕ್ಕರ್ ಮನೋಜ್ ಮೂರನೇ ಸಿನಿಮಾ ʻಗಾರ್ಡನ್ʼ ಶುರು


ಟಕ್ಕರ್ ಮನೋಜ್ ಮೂರನೇ ಸಿನಿಮಾ ʻಗಾರ್ಡನ್ʼ ಶುರು

ʻಗಾರ್ಡನ್ʼಗೆ ಅದ್ಧೂರಿ ಮುಹೂರ್ತ
****
ಗಾರ್ಬೇಜ್ ಮಾಫಿಯಾ ಸುತ್ತ ಗಾರ್ಡನ್?


ಆರ್ಯ ಮಹೇಶ್ ನಿರ್ದೇಶನದಲ್ಲಿ ಶುರುವಾಯ್ತು ʻಗಾರ್ಡನ್ʼ

ನಮ್ಮ ನಗರಗಳು ಸ್ವಚ್ಛವಾಗಿ, ಸುಂದರವಾಗಿ ಮತ್ತು ಆರೋಗ್ಯಕರವಾಗಿರುವುದರ ಹಿಂದೆ ಅದೆಷ್ಟೋ ಶ್ರಮಿಕರ ಬೆವರು ಮತ್ತು ತ್ಯಾಗ ಅಡಗಿದೆ. ಸೂರ್ಯೋದಯಕ್ಕೂ ಮುನ್ನವೇ ಎದ್ದು, ಬೆಳಗಿನ ಚಳಿಯಲ್ಲಿ, ಮಧ್ಯಾಹ್ನದ ಕಡು ಬಿಸಿಲಿನಲ್ಲಿ, ಮಳೆಯಲ್ಲೂ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಜೀವಗಳೆಂದರೆ, ಅವರು ಪೌರ ಕಾರ್ಮಿಕರು. ನಾವು ತಿಂದು ಬಿಸಾಡುವ ಕಸ, ಚರಂಡಿಯಲ್ಲಿ ತುಂಬಿದ ಕೊಳೆ, ಬೀದಿಗಳಲ್ಲಿ ಚೆಲ್ಲಾಪಿಲ್ಲಿಯಾಗಿರುವ ತ್ಯಾಜ್ಯ ಎಲ್ಲವನ್ನೂ ಇವರು ಸ್ವಚ್ಛಗೊಳಿಸದಿದ್ದರೆ ನಮ್ಮ ನಗರಗಳ ಪರಿಸ್ಥಿತಿ ಏನಾಗುತ್ತಿತ್ತು? ಪೌರ ಕಾರ್ಮಿಕರ ಸ್ಥಿತಿಗತಿಗಳ ಕುರಿತು ಹೇಳಲು ಸಾಕಷ್ಟು ವಿವರಗಳಿವೆ. ಸದ್ಯ ಪೌರಕಾರ್ಮಿಕರ ಬದುಕನ್ನು ಕಟ್ಟಿಕೊಡುವ ‘ಗಾರ್ಡನ್’ ಸಿನಿಮಾ ಅದ್ಧೂರಿಯಾಗಿ ಆರಂಭಗೊಂಡಿದೆ 

ಆರ್ಯ ಮಹೇಶ್ ನಿರ್ದೇಶನದಲ್ಲಿ, ಟಕ್ಕರ್ ಮನೋಜ್ ನಟನೆಯಲ್ಲಿ ಗಾರ್ಡನ್ ಮೂಡಿಬರಲಿದೆ. ಮುಹೂರ್ತದ ದಿನ ಫಸ್ಟ್ ಲುಕ್ ಪೋಸ್ಟರ್ ಕೂಡಾ ಅನಾವರಣಗೊಂಡಿದೆ. ಇದರಲ್ಲಿ ಹೀರೋ ಮುಖವನ್ನು ನೇರವಾಗಿ ಅನಾವರಣ ಮಾಡಿಲ್ಲ. ಬದಲಿಗರ ಕೈ ಮುಷ್ಟಿ ಹಿಡಿದು, ಹಿಮ್ಮುಖವಾಗಿ ನಿಂತಿರುವ ಸ್ಟಿಲ್, ಅದರ ಮೇಲೆ ಬಿಬಿಎಂಪಿ ಬಿಲ್ಡಿಂಗ್, ಬೆಂಗಳೂರು ಮಹಾನಗರ ಪಾಲಿಕೆ ಎನ್ನುವ ಮುದ್ರೆ ಮುಂತಾದ ಎಲಿಮೆಂಟುಗಳನ್ನು ಬಳಸಲಾಗಿದೆ. ಮೇಲ್ನೋಟಕ್ಕೆ ಇದು ಬೆಂಗಳೂರಿನ ಕಸ ವಿಲೇವಾರಿ ಮತ್ತು ಅದರ ಸುತ್ತಲಿನ ಮಾಫಿಯಾದ ಸುತ್ತ ಇರುವ ಕಥಾಹಂದರ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುವಂತಿದೆ. 


ಮುಹೂರ್ತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ ದಿನಕರ್ ತೂಗುದೀಪ ʻಮನೋಜ್ ನಮ್ಮ ಮನೆ ಹುಡುಗ. ಸಿನಿಮಾ ಬಗ್ಗೆ ಅಪಾರವಾದ ಒಲವಿಟ್ಟುಕೊಂಡಿದ್ದಾನೆ. ಈ ಚಿತ್ರದ ಎಳೆಯನ್ನು ಕೇಳಿದ್ದೀನಿ. ಮನೋಜ್ಗೆ ಹೇಳಿ ಮಾಡಿಸಿದಂತಾ ಪಾತ್ರವನ್ನು ನಿರ್ದೇಶಕ ಮಹೇಶ್ ರಚಿಸಿದ್ದಾರೆʼ ಎಂದರು. ʻʻಕೋವಿಡ್ ನಂತರ ಚಿತ್ರರಂಗ ಬದಲಾಗಿದೆ. ಜನ ಜಗತ್ತಿನ ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಭಿನ್ನ ಕಥಾವಸ್ತುವನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಹೀಗಾಗಿ, ನಾವು ಯಾರಿಗೂ ಗೊತ್ತಿಲ್ಲದ ವಿವರಗಳನ್ನು, ವಿಶೇಷವಾಗಿ ಹೇಳಲೇಬೇಕಿದೆ. ಇನ್ನೇನು ಚಿತ್ರೀಕರಣ ಮುಗಿಸಿರುವ ನನ್ನ ಧರಣಿಯಲ್ಲಿ ಅಂಥದ್ದೊಂದು ಕಥಾವಸ್ತುವಿತ್ತು. ಈಗ ಗಾರ್ಡನ್ ಕೂಡಾ ಬೆಂಗಳೂರಿನ ಅನ್ ಟೋಲ್ಡ್ ವಿಚಾರಗಳನ್ನು ಒಳಗೊಂಡಿದೆ. ಇದರಲ್ಲಿ ಸೆಂಟಿಮೆಂಟ್ ಹೆಚ್ಚಿದೆʼ ಎಂದರು. ಇನ್ನು ನಿರ್ದೇಶಕ ಆರ್ಯ ಮಹೇಶ್ ಮಾತಾಡಿ, ʻʻಈ ಸಲ ಕೂಡಾ ನಾನು ನೈಜ ಕಥಾವಸ್ತುವನ್ನು ಕೈಗೆತ್ತಿಕೊಂಡಿದ್ದೀನಿ. ಬೆಂಗಳೂರಿನ ಡಂಪಿಂಗ್ ಯಾರ್ಡ್ಗಳನ್ನು ʻಗಾರ್ಡನ್ʼ ಅಂತಾ ಕರೀತಾರೆ. ನಮ್ಮ ಚಿತ್ರದ ಬಹುತೇಕ ನಡೆಯೋದು ಕಸ ವಿಲೇವಾರಿ ವಿಚಾರದ ಸುತ್ತ. ಹೀಗಾಗಿ ಗಾರ್ಡನ್ ಎಂದು ಹೆಸರಿಟ್ಟಿದ್ದೀನಿʼʼ ಎಂದರು

ಈ ಚಿತ್ರದಲ್ಲಿ ಇಬ್ಬರು ಹುಡುಗಿಯರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನು ಪ್ರೇಮಾ ಮತ್ತು ಸೋನಮ್ ರೈ ಇಬ್ಬರೂ ಮನೋಜ್ ಅವರ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ʻʻಈ ಚಿತ್ರದಲ್ಲಿ ರೆಗ್ಯುಲರ್ ಹೀರೋ ಹೀರೋಯಿನ್ ಥರದ ಪಾತ್ರಗಳಿರೋದಿಲ್ಲ. ನನ್ನ ಪಾತ್ರ ತುಂಬಾ ವಿಶೇಷತೆಯನ್ನು ಹೊಂದಿದೆʼʼ ಎಂದು ಅನುಪ್ರೇಮಾ ಹೇಳಿದರು. ಸೋನಮ್ ರೈ ಮಾತಾಡುತ್ತಾ, ʻʻಎರಡು ವರ್ಷಗಳಿಂದ ಚಿತ್ರರಂಗದಿಂದ ದೂರ ಇದ್ದೆ. ನಿರ್ದೇಶಕ ಮಹೇಶ್ ಅವರು ಹೇಳಿದ ಪಾತ್ರ ನನಗೆ ಅಪಾರವಾಗಿ ಇಷ್ಟವಾಯ್ತು. ಹೀಗಾಗಿ ಮತ್ತೆ ಬಣ್ಣ ಹಚ್ಚಲು ಬಂದಿದ್ದೀನಿʼʼ ಎಂದರು.  ನಿರ್ಮಾಪಕ ಜಿ. ಮುನಿರಾಜು ಮಾತನಾಡಿ, ʻʻನಾನು ನಿರ್ದೇಶಕ ಮಹೇಶ್ ಅವರ ಬೊಂಬೂ ಸವಾರಿ ಚಿತ್ರಕ್ಕೆ ಸಹ ನಿರ್ಮಾಪಕನಾಗಿದ್ದೆ. ಈ ಸಲ ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕನಾಗಿ ಗಾರ್ಡನ್ ಚಿತ್ರವನ್ನು ನಿರ್ಮಿಸುತ್ತಿದ್ದೇನೆʼʼ ಎಂದರು. ಪತ್ರಿಕಾಗೋಷ್ಟಿಯಲ್ಲಿ ಛಾಯಾಗ್ರಾಹಕ ಮುಂಜಾನೆ ಮಂಜು, ಸಾಹಸ ನಿರ್ದೇಶಕ ವೈಲೆಂಟ್ ವೇಲು, ಕೊರಿಯೋಗ್ರಾಫರ್ ಟಗರು ರಾಜು, ಸಂಕಲನಕಾರ ಜಿ ಗಿರೀಶ್ ಕುಮಾರ್ ಮುಂತಾದವರು ಹಾಜರಿದ್ದರು. ಮುಹೂರ್ತ ಸಮಾರಂಭಕ್ಕೆ ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್, ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ್, ರಾಯಲ್ ಎಸ್.ಆರ್. ಅನಿಲ್ ಕುಮಾರ್, ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಪಿ. ಮೂರ್ತಿ ಮುಂತಾದವರು  ಆಗಮಿಸಿ ಶುಭ ಕೋರಿದರು.

ಎಂ.ಆರ್. ಸಿನಿಮಾಸ್ ಬ್ಯಾನರ್ ಮೂಲಕ ಜಿ. ಮುನಿರಾಜು ನಿರ್ಮಿಸುತ್ತಿರುವ ಗಾರ್ಡನ್ ಚಿತ್ರತಂಡ ಇದೇ ತಿಂಗಳ ಕೊನೆಯ ಭಾಗದಲ್ಲಿ ಅಥವಾ ಅಕ್ಟೋಬರ್ ತಿಂಗಳ ಆರಂಭದಲ್ಲಿ ಚಿತ್ರೀಕರಣಕ್ಕೆ ತೆರಳಲಿದೆ.

Related posts

ಮುಹೂರ್ತ ಆಚರಿಸಿಕೊಂಡ ‘Case of ಕೊಂಡಾಣ’…. ದೇವಿಪ್ರಸಾದ್ ಶೆಟ್ಟಿ ಜೊತೆಗೆ ಮತ್ತೆ ಕೈಜೋಡಿಸಿದ ವಿಜಯ್ ರಾಘವೇಂದ್ರ

Kannada Beatz

ಕೆರೆ ಬೇಟೆ’ ಸಿನಿಮಾ ಮೂಲಕ ಮತ್ತೋರ್ವ ನಟಿ ಬಿಂದು ಎಂಟ್ರಿ

Kannada Beatz

ಧರ್ಮ ಕೀರ್ತಿರಾಜ್ ಅಭಿನಯದ “ಬುಲೆಟ್” ಚಿತ್ರ ತೆರೆಗೆ ಬರಲು ಸಿದ್ದ.

Kannada Beatz

Leave a Comment

Share via
Copy link
Powered by Social Snap