ಅರ್ಜುನ್ ಜನ್ಯ ಅವರು ಇಷ್ಟು ವರ್ಷಗಳ ಕಾಲ ಮ್ಯೂಸಿಕ್ ಲೋಕದಲ್ಲಿ ಗಮನ ಸೆಳೆದವರು. ಅವರು ಈಗ ‘45’ ಸಿನಿಮಾನ ನಿರ್ದೇಶನ ಮಾಡಿದ್ದಾರೆ. ಮೊದಲ ಚಿತ್ರ ಎಂದರೆ ದೊಡ್ಡ ಚಾಲೆಂಜ್ ಇರುತ್ತದೆ. ಈ ಚಾಲೆಂಜ್ ಮಧ್ಯೆ ಅರ್ಜುನ್ ಅವರು ಮಲ್ಟಿ ಸ್ಟಾರರ್ ಹಾಗೂ ಬಿಗ್ ಬಜೆಟ್ನ ಆಯ್ಕೆ ಮಾಡಿಕೊಂಡಿದ್ದಾರೆ. ಗ್ರಾಫಿಕ್ಸ್ ಬಹುವಾಗಿರೋ ‘45’ ಚಿತ್ರದ ವಿಮರ್ಶೆ ಇಲ್ಲಿದೆ

ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಎಲ್ಲರನ್ನು ತೃಪ್ತಿಪಡಿಸುವಂತಹ ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ. ಆ ಪ್ರಯತ್ನದಲ್ಲಿ ಅರ್ಜುನ್ ಜನ್ಯಾ ಗೆದ್ದಿದ್ದಾರೆ. ಯಾರು ಎಷ್ಟು ಹೊತ್ತು ತೆರೆಮೇಲೆ ಇದ್ರು ಎನ್ನುವುದಕ್ಕಿಂತ ಅಂತಿಮವಾಗಿ ಅವರ ಹಾಜರಿ ಎಂಥಹ ಅನುಭವ ನೀಡುತ್ತದೆ ಎನ್ನುವುದು ಮುಖ್ಯವಾಗುತ್ತದೆ.
ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟನೆಯ ’45’ ಸಿನಿಮಾ ತೆರೆಗಪ್ಪಳಿಸಿದೆ. ಈ ವರ್ಷದ ಹಿಟ್ ಸಿನಿಮಾಗಳ ಲಿಸ್ಟ್ ಸೇರುವ ಸುಳಿವು ಸಿಕ್ಕಿದೆ. ಸ್ಟಾರ್ ನಟನ ವೀರಾಭಿಮಾನಿಯೊಬ್ಬ ಸಿನಿಮಾ ನಿರ್ದೇಶನ ಮಾಡಿದ್ರೆ ಹೇಗಿರುತ್ತೆ? ಎನ್ನುವುದಕ್ಕೆ ’45’ ಬೆಸ್ಟ್ ಎಕ್ಸಾಂಪಲ್. ನಾನು ಶಿವಣ್ಣ, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ಅವರ ಅಭಿಮಾನಿ ಎಂದು ಅರ್ಜುನ್ ಜನ್ಯಾ ಪದೇ ಪದೆ ಹೇಳುತ್ತಿದ್ದರು. ಇದೀಗ ತಮ್ಮ ನೆಚ್ಚಿನ ನಟರನ್ನು ಅಭಿಮಾನಿಗಳು ಹೇಗೆ ತೆರೆಮೇಲೆ ನೋಡಲು ಬಯಸುತ್ತಾರೋ ಅದೇ ರೀತಿ ’45’ ಚಿತ್ರದಲ್ಲಿ ಮೂವರನ್ನು ಜನ್ಯಾ ತೋರಿಸಿ ಗೆದ್ದಿದ್ದಾರೆ.

ಶಿವಣ್ಣದ ಆರ್ಭಟಕ್ಕೆ ನಾನಾ ಅವತಾರಗಳಿಗೆ ಶಿಳ್ಳೆ ಚಪ್ಪಾಳೆ ಸಿಗುತ್ತಿದೆ. ಚಿತ್ರದ ಕಥೆ ಐಟಿ ಉದ್ಯೋಗಿ ವಿನಯ್(ರಾಜ್ ಬಿ. ಶೆಟ್ಟಿ). ತನ್ನದೇ ಪ್ರಪಂಚದಲ್ಲಿ ಹಾಯಾಗಿ ಇರ್ತಾನೆ. ಅದೊಂದು ಘಟನೆ ಆತನ ‘ಜೀವ’ನಕ್ಕೆ ಕುತ್ತು ತಂದುಬಿಡುತ್ತದೆ. ರಾಯಪ್ಪ(ಉಪೇಂದ್ರ)ನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅಲ್ಲಿಂದ ಸಾವಿನ ತೂಗುಗತ್ತಿ ಕೆಳಗೆ 45 ದಿನಗಳ ಓಟ ಶುರುವಾಗುತ್ತದೆ. ಮುಂದೆ ಆತನ ಸಹಾಯಕ್ಕೆ ಶಿವಪ್ಪ(ಶಿವರಾಜ್‌ಕುಮಾರ್) ಬರ್ತಾನೆ. ಅಂತಿಮವಾಗಿ ಇದು ಶಿವಣ್ಣ ಹಾಗೂ ರಾಯಪ್ಪನ ಸಮರಕ್ಕೆ ವೇದಿಕೆಯಾಗುತ್ತದೆ.

ಮುಂದೇನು ಎನ್ನುವುದು ’45’ ಸಿನಿಮಾ ಕಥೆ. ಇದಕ್ಕಿಂತ ಹೆಚ್ಚು ಹೇಳಿದರೆ ಸಿನಿಮಾ ನೋಡುವ ಸ್ವಾರಸ್ಯ ಹಾಳಾಗಬಹುದು.

