ರಕ್ತಾಕ್ಷ ಎಂಬ ಸಿನಿಮಾ ಮೂಲಕ ಯುವ ಪ್ರತಿಭೆ ರೋಹಿತ್ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಳೆದ ಆರು ವರ್ಷದಿಂದ ಮಾಡೆಲಿಂಗ್ ನಲ್ಲಿ ಮಿಂಚಿದ್ದ ರೋಹಿತ್ ತಮ್ಮದೇ ಸಾಯಿ ಪ್ರೊಡಕ್ಷನ್ ಸಂಸ್ಥೆಯಡಿ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ವಾಸುದೇವ ಎಸ್ಎನ್ ಎಂಬುವವರು ಈ ಚಿತ್ರದ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ. ಒಂದಷ್ಟು ಸಿನಿಮೋತ್ಸಾಹಿ ಪ್ರತಿಭೆಗಳು ಸೇರಿ ತಯಾರಿಸುತ್ತಿರುವ ರಕ್ತಾಕ್ಷ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.. ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದರ್ ದಾಸ್ ದಾಸ್ಮೋಡ ಸಂಗೀತದ ಟೈಟಲ್ ಟ್ರ್ಯಾಕ್ ಗೆ ವಸಿಷ್ಠ ಸಿಂಹ ಧ್ವನಿಯಾಗಿದ್ದಾರೆ. ಸಿನಿಮಾ ಬಗ್ಗೆ ಹಾಗೂ ಹಾಡಿನ ಬಗ್ಗೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.
ನಟ ಕಂ ನಿರ್ಮಾಪಕರಾದ ರೋಹಿತ್ ಮಾತನಾಡಿ, ಬಾಲ್ಯದಿಂದಲೂ ಕಲಾವಿದನಾಗಬೇಕು ಎಂಬ ಕನಸಿತ್ತು. ಇದು ಈಗ ನನಸಾಗಿದೆ..3 ತಿಂಗಳಲ್ಲಿ ಲುಕ್, ಫಿಸಿಕ್ಸ್ ಬದಲಾಯಿಸಲು ಹೇಳಿದರೆ ಬದಲಾಯಿಸುತ್ತೇನೆ. ಈ ಚಿತ್ರಕ್ಕಾಗಿ ಎರಡರಿಂದ ಮೂರು ಬಾರಿ ಬಾಡಿ ಟ್ರಾನ್ಸ್ಫರ್ಮೇಶನ್ ಮಾಡಿದ್ದೇನೆ. ನಾನು ರೀಲ್ ಹೀರೋ ಆಗಲು ಬಂದಿಲ್ಲ. ರಿಯಲ್ ಹೀರೋ ಆಗಲು ಬಂದಿದ್ದೇನೆ. ನನ್ನ ಕೆಲಸ ಮುಖಾಂತರ ಎಲ್ಲರಿಗೂ ಪರಿಚಯವಾಗಬೇಕು. ಉತ್ತರಕರ್ನಾಟಕದಲ್ಲಿಯೂ ತುಂಬಾ ಟ್ಯಾಲೆಂಟ್ಸ್ ಇದ್ದಾರೆ. ಅವರಿಗೆಲ್ಲಾ ನನ್ನ ಕೈಯಲ್ಲಾದ ಅವಕಾಶ ಕೊಡುತ್ತೇನೆ. ಈ ಚಿತ್ರದಲ್ಲಿ ಕೆಲವೊಂದು ಸತ್ಯಘಟನೆಯನ್ನು ಉಲ್ಲೇಖ ಮಾಡಲಾಗಿದೆ ಎಂದರು.
ನಿರ್ದೇಶಕರಾದ ವಾಸುದೇವ ಎಸ್ಎನ್ ಮಾತನಾಡಿ, ನನ್ನ ಮೊದಲ ಸಿನಿಮಾ, ರಕ್ತಾಕ್ಷ ಅಂದತಕ್ಷಣ ಮಾಸ್ ಟೈಟಲ್ ಎನಿಸುತ್ತದೆ,. ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಎಂದು ಎಲ್ಲಾ ಹೇಳ್ತಿದ್ದಾರೆ. ಮಾಸ್ ಆಗಿಯೂ ಸಸ್ಪೆನ್ಸ್ ಥ್ರಿಲ್ಲರ್ ಆಗಿಯೂ ಎಲ್ಲಾ ರೀತಿಯೂ ಇದೆ. ಸಾಂಗ್ ತುಂಬಾ ಅದ್ಭುತವಾಗಿ ಬಂದಿದೆ. ಸಿನಿಮಾ ಚೆನ್ನಾಗಿ ಬಂದಿದೆ ಎಂದರು.
ನಟಿ ರೂಪಾ ರಾಯಪ್ಪ ಮಾತನಾಡಿ, ಈ ಚಿತ್ರದಲ್ಲಿ ನಾನು ಪ್ರಮುಖವಾದ ಪಾತ್ರವೊಂದನ್ನು ಮಾಡಿದ್ದೇನೆ. ಈ ಸಿನಿಮಾ ನಾನು ಆಯ್ಕೆ ಮಾಡಲು ಕಾರಣ ರೋಹಿತ್ ಅವರಲ್ಲಿನ ಪ್ರಾಮಾಣಿಕತೆ. ರೋಹಿತ್ ಎಲ್ಲಾ ಕಲಾವಿದರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಟೈಟಲ್ ಟ್ರ್ಯಾಕ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಬ್ಬರೂ ಸಿನಿಮಾ ಬೆಂಬಲಿಸಿ ಎಂದರು.
ಮೂಲತಃ ಉತ್ತರ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ಮುದ್ಗಲ್ ಎಂಬ ಪುಟ್ಟ ಪಟ್ಟಣದ ರೋಹಿತ್ ಮಾಡಲಿಂಗ್ ಜೊತೆಗೆ ಎರಡು ವರ್ಷಗಳ ರಂಗಭೂಮಿ ಅನುಭವ ಪಡೆದಿದ್ದಾರೆ. ಪ್ರತಿಷ್ಠಿತ ಬ್ರ್ಯಾಂಡ್ ಪ್ರತಿನಿಧಿಸಿರುವ ರೋಹಿತ್ ಎಬಿ ಪಾಸಿಟಿವ್ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದರು. ಇದೀಗ ರಕ್ತಾಕ್ಷ ಸಿನಿಮಾ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ಪ್ರಮೋದ್ ಶೆಟ್ಟಿ, ರಚನಾ ದಶರತ್, ಗುರುದೇವ್ ನಾಗರಾಜ, ವಿಲಾಸ್ ಕುಲಕರ್ಣಿ, ಶಿವಮೊಗ್ಗ ರಾಮಣ್ಣ ಸೇರಿದಂತೆ ಹಲವರು ತಾರಾಬಗಳದಲ್ಲಿದ್ದಾರೆ.