ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ನಿರ್ಮಾಪಕರು, ನಿರ್ದೇಶಕರಾಗೋದು, ನಿರ್ದೇಶಕರು ನಿರ್ಮಾಪಕರಾಗುವುದು ಕಾಮನ್. ಈ ಹಿಂದೆ ಪ್ರಯಾಣಿಕರ ಗಮನಕ್ಕೆ, ರಣಹೇಡಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಡಿಎಂ ಸುರೇಶ್ ಈಗ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಚೋಳ ಎಂಬ ಸಿನಿಮಾ ಮೂಲಕ ಸುರೇಶ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಇವತ್ತು ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಯಿತು.
ನಿರ್ಮಾಣದ ನಂತರ ಹೆಚ್ಚಿನ ಜವಾಬ್ದಾರಿ ಹೊತ್ತು ನಿರ್ದೇಶನ ಹೊಣೆ ಹೊತ್ತಿದ್ದು, ಜೊತೆಗೆ ನಿರ್ಮಾಣ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕ ಭಾಗದ ಖ್ಯಾತ ನಟ ರೂರಲ್ ಸ್ಟಾರ್ ಅಂಜನ್ ನಾಯಕ ನಟನಾಗಿ ನಟಿಸ್ತಿದ್ದು, ದಿಶಾ ಪಾಂಡೆ, ರಚನಾ ನಾಯಕಿಯಾಗಿ ನಟಿಸ್ತಿದ್ದಾರೆ ಎಂದು ನಿರ್ದೇಶಕ ಕಂ ನಿರ್ಮಾಪಕ ಡಿಎಂ ಸುರೇಶ್ ಮಾಹಿತಿ ನೀಡಿದರು.
ಚೋಳ ಅಂದತಕ್ಷಣ ರಾಜಮನೆತನ ನೆನಪಾಗುತ್ತದೆ. ಇದು ಆ ಕಥೆಯಲ್ಲ. ಈ ಸಿನಿಮಾದಲ್ಲಿ ನನಗೆ ಎರಡು ಗೆಟಪ್ ಇರುತ್ತದೆ. ತಂದೆ ತಾಯಿ ನೆಚ್ಚಿನ ಮಗನಾಗಿ ಇರುವ ನಾಯಕ ರೌಡಿ ಯಾಕೆ ಆಗುತ್ತಾನೆ ಅನ್ನೋದೇ ಕಥೆಯ ತಿರುಳು ಎಂದು ನಾಯಕ ಅಂಜನ್ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
ಮಾಸ್ ಸಿನಿಮಾವಾಗಿರುವ ಚೋಳ ಚಿತ್ರದಲ್ಲಿ ರೂರಲ್ ಸ್ಟಾರ್ ಅಂಜನ್ ಗೆ ಜೋಡಿಯಾಗಿ ದಿಶಾ ಪಾಂಡೆ, ರಚನಾ ನಾಯಕಿಯಾಗಿ ನಟಿಸ್ತಿದ್ದು, ಉಳಿದಂತೆ ಅವಿನಾಶ್, ಶೋಭರಾಜ್, ದಿನೇಶ್ ಮಂಗಳೂರು, ಅಚ್ಯುತ್ ಕುಮಾರ್, ಧರ್ಮ, ಶಶಿಕಲಾ, ಅಭಿನಯ ಹಾಗೂ ಚಿತ್ರ ನಟಿಸ್ತಿದ್ದಾರೆ.
ಸೃಷ್ಟಿ ಎಂಟರ್ ಪ್ರೈಸಸ್ ಬ್ಯಾನರ್ ನಡಿ ಚೋಳ ಸಿನಿಮಾಗೆ ಡಿಎಂ ಸುರೇಶ್ ಬಂಡವಾಳ ಹೂಡಿದ್ದು, ಲಾಯ್ ವ್ಯಾಲೆಂಟಿನ್ ಸಲ್ಡಾನಾ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಕ್ಯಾಮೆರಾ, ಶಿವಸರ್ವಂ ಸಂಕಲನ ಸಿನಿಮಾಕ್ಕಿದೆ. ಸದ್ಯ ಫಸ್ಟ್ ಲುಕ್ ರಿಲೀಸ್ ಮಾಡಿರುವ ಚಿತ್ರತಂಡ ಮುಂದಿನ ವಾರದಿಂದ ಶೂಟಿಂಗ್ ಗೆ ಸಜ್ಜಾಗಿದ್ದು, ಬಳ್ಳಾರಿ, ಮಡಿಕೇರಿ, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಹಾಕಿದೆ.