ಆಪಲ್ ಬಾಕ್ಸ್ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಇನ್ನು ಮುಂದೆ ಚಿತ್ರಗಳನ್ನು ನಿರ್ಮಿಸುವುದಾಗಿ ರಮ್ಯಾ ಯಾವಾಗ ಘೋಷಿಸಿದರೋ, ಆಗಿನಿಂದಲೂ ಆ ಚಿತ್ರ ಯಾವುದಿರಬಹುದು? ಯಾರು ನಟಿಸಬಹುದು? ರಮ್ಯಾ ಬರೀ ನಿರ್ಮಾಪಕಿಯಾಗಿರುತ್ತಾರಾ ಅಥವಾ ಈ ಚಿತ್ರದ ಮೂಲಕ ನಟನೆಗೆ ವಾಪಸ್ಸಾಗುತ್ತಾರಾ? ಎಂಬಂತಹ ಹಲವು ಪ್ರಶ್ನೆಗಳು ಇದ್ದವು. ಈಗ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.
ವಿಜಯದಶಮಿಯ ದಿನದಂದು ರಮ್ಯಾ ತಮ್ಮ ನಿರ್ಮಾಣದ ಮೊದಲ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರಿನ ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರಾಜ್ ಹೇಳಿದ ಕಥೆಯಿಂದ ಖುಷಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ರಮ್ಯಾ ಹೇಳಿಕೊಂಡಿದ್ದಾರೆ. ಪ್ರೀ-ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವು ಸದ್ಯದಲ್ಲೇ ಪ್ರಾರಂಭವಾಗಲಿದೆ. ರಾಜ್ ಶೆಟ್ಟಿ ನಿರ್ದೇಶನದ ‘ಗರುಡ ಗಮನ ಋಷಭ ವಾಹನ’ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರವೀಣ್ ಶ್ರೀಯಾನ್ ಮತ್ತು ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಇಲ್ಲೂ ಮುಂದುವರೆಯಲಿದ್ದಾರೆ.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ರಮ್ಯಾ ಅವರ ಆಪಲ್ಬಾಕ್ಸ್ ಸ್ಟುಡಿಯೋಸ್ ಮತ್ತು ಲೈಟರ್ ಬುದ್ಧ ಫಿಲಂಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.