.
ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್‌ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ ‘ರವಿಕೆ ಪ್ರಸಂಗ’. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಈಗ ಚಿತ್ರತಂಡ ‘ರವಿಕೆ ಪ್ರಸಂಗ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದೆ.
ಖ್ಯಾತ ನಟ ಡಾಲಿ ಧನಂಜಯ ಅವರು ಟ್ರೇಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ರವಿಕೆ ಅಂದರೆ ಬ್ಲೌಸನ್ನು ಪ್ರಮುಖವಾಗಿ ಇಟ್ಟುಕೊಂಡು ಕೌಟುಂಬಿಕ ಕಥಾ ಹಂದರದಿಂದ ಹಾಸ್ಯಭರಿತ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ ‘ರವಿಕೆಪ್ರಸಂಗ’ ಫೆಬ್ರವರಿ 16 ರಂದು ತೆರೆಕಾಣಲಿದೆ ಎಂದು ನಿರ್ದೇಶಕ ಸಂತೋಷ್ ಕೊಡೆಂಕೇರಿ ತಿಳಿಸಿದ್ದಾರೆ.
‘ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಹಾಡನ್ನು ಮಾನಸ ಹೊಳ್ಳ, ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಝೇಂಕಾರ್ ಮ್ಯೂಸಿಕ್ ಚಿತ್ರದ ಆಡಿಯೋ ರೈಟ್ಸ್ ಪಡೆದಿದೆ. ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ. ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಬ್ಲೌಸ್ ಇರಬೇಕು. ಸಾವಿರಾರೂ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆಯ ಟೇಲರ್ ಹತ್ತಿರ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ. ಏನೋ ಒಂದು ಸರಿಯಾಗಿರಲ್ಲ. ಇಂಥದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ ‘ರವಿಕೆ ಪ್ರಸಂಗ’. ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದ್ದು, ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲು ಚಿತ್ರೀಕರಣ ನಡೆದಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಬಹಳ ಕುತೂಹಲವಿದೆ. ಫೆಬ್ರವರಿ 16 ರಂದು ರವಿಕೆಪ್ರಸಂಗ ರಾಜ್ಯಾದ್ಯಂತ ತೆರೆಕಾಣಲಿದೆ