ಎರಡು ದಶಕಗಳ ನಂತರ ಮತ್ತೆ
ಮೆಜೆಸ್ಟಿಕ್ ನಲ್ಲಿ ಮರಿದಾಸನ ಹವಾ..
ನಟ ದರ್ಶನ್ ಗೆ ದಾಸ ಎಂಬ ಹೆಸರು ಬಂದಿದ್ದೇ ಮೆಜೆಸ್ಟಿಕ್ ಚಿತ್ರದಿಂದ. 22 ವರ್ಷಗಳ ಹಿಂದೆ ತೆರೆಕಂಡು ದೊಡ್ಡ ದಾಖಲೆ ಬರೆದಿದ್ದ ಮೆಜೆಸ್ಟಿಕ್ ಸಿನಿಮಾ ನಟ ದರ್ಶನ್ ಗೆ ಒಳ್ಳೇ ಹೆಸರನ್ನೂ ತಂದುಕೊಟ್ಟಿತ್ತು. ಆ ಚಿತ್ರಕ್ಕೆ ಆರಂಭದಲ್ಲಿ ಕಾನ್ಸೆಪ್ಟ್ ಹೆಣೆದಿದ್ದ ರಾಮು ಅವರೇ ಈಗ ಮೆಜೆಸ್ಟಿಕ್ ೨ ಹೆಸರಲ್ಲಿ ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರೆ. ಮಹಾಶಿವರಾತ್ರಿಯ ಶುಭ ದಿನದಂದು ಆ ಚಿತ್ರ ಸೆಟ್ಟೇರಲು ಸಿದ್ದವಾಗಿದೆ. ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ.
ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಚಿತ್ರದುರ್ಗ ಮೂಲದ ಟಿ. ಆನಂದಪ್ಪ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ದಶಕಗಳಿಂದಲೂ ತಂತ್ರಜ್ಞನಾಗಿ ಕೆಲಸ ಮಾಡುತ್ತಿರುವ ರಾಮು ಅವರು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಸೋಮವಾರ ಮೆಜೆಸ್ಟಿಕ್ -೨ ಚಿತ್ರದ ಟೈಟಲ್ ಅನಾವರಣ ಸಮಾರಂಭ ನೆರವೇರಿತು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಸ್ನೇಹಿತರು ಹಾಜರಿದ್ದು ಶುಭ ಹಾರೈಸಿದರು. ಆರಂಭದಲ್ಲಿ ಮಾತನಾಡಿದ ನಿರ್ಮಾಪಕ ಆನಂದಪ್ಪ ನಾನು ಈ ಹಿಂದೆ ಪಿಂಕ್ ನೋಟ್ ಎಂಬ ಚಿತ್ರವನ್ನು ಆರಂಭಿಸಿದ್ದೆ, ಅದಾಗಲೇ ೯೦ರಷ್ಟು ಮುಗಿದಿದೆ. ಇದು ಎರಡನೇ ಚಿತ್ರ. ಸ್ನೇಹಿತ ರಾಮು ಬಹಳ ದಿನಗಳಿಂದ ಈ ಕಥೆ ಚೆನ್ನಾಗಿದೆ ನೋಡಿ ಅಂತ ಹೇಳ್ತಾ ಇದ್ದರು, ಒಮ್ಮೆ ಕಥೆ ಕೇಳಿದೆ, ಇಷ್ಟವಾಯ್ತು, ಜನ ನಮ್ಮ ಸಿನಿಮಾ ನೋಡಿ ಅದರಲ್ಲಿ ಏನಾದರೂ ಆಯ್ಕೆ ಮಾಡಿಕೊಳ್ಳಬೇಕು, ಅಂಥ ಸಿನಿಮಾ ಮಾಡಿ ಎಂದೆ, ನಾವೆಲ್ಲ ಸೇರಿ ಒಳ್ಳೇ ಚಿತ್ರ ಮಾಡುತ್ತಿದ್ದೇವೆ, ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು.
ನಂತರ ಮಾತನಾಡಿದ ಶಿಲ್ಪಾ ಶ್ರೀನಿವಾಸ್, ನಾನು 1976ರಿಂದ ಚಿತ್ರರಂಗದಲ್ಲಿದ್ದೇನೆ, ಬಹುತೇಕ ಸ್ಟಾರ್‌ಗಳ ಜೊತೆ 25 ಸಿನಿಮಾಗಳನ್ನು ನಿರ್ಮಿಸಿದ್ದು, 500ಕ್ಕೂ ಹೆಚ್ಚು ಚಿತ್ರಗಳನ್ನು ವಿತರಿಸಿದ್ದೇನೆ. ನನ್ನ ಮಗ ಭರತ್ ಮೊದಲ ಬಾರಿಗೆ ಹೀರೋ ಆಗ್ತಿದಾನೆ. ದೇವರ ರೂಪದಲ್ಲಿ ಆನಂದಪ್ಪ ಅವರನ್ನು ಕಳಿಸಿದ್ದಾನೆ. ನಿರ್ದೇಶಕ ರಾಮು,
ಸಂಗೀತ ನಿರ್ದೇಶಕ ವಿನು ಮನಸು, ಛಾಯಾಗ್ರಾಹಕ ವೀನಸ್ ಮೂರ್ತಿ ಇವರೆಲ್ಲರ ಕಲ್ಪನೆಯಲ್ಲಿ ಮೆಜೆಸ್ಟಿಕ್ ಚಿತ್ರ ಮೂಡಿಬರುತ್ತಿದೆ. ನಮ್ಮ ಉಸಿರಲ್ಲಿ ಉಸಿರಾಗಿ, ಜೀವದಲ್ಲಿ ಜೀವವಾಗಿ, ಬೆರೆತು ಹೋಗಿರೋ ಮಾಧ್ಯಮಮಿತ್ರರು, ಇದು ನಿಮ್ಮ ಸಿನಿಮಾ ಅಂತ ಚಿತ್ರಕ್ಕೆ ಆಶೀರ್ವಾದ ಮಾಡಿ ಎಂದು ವಿನಂತಿಸಿಕೊಳ್ಳುತ್ತೇನೆ. 25 ವರ್ಷದ ಹಿಂದೆ ದರ್ಶನ್‌ರನ್ನು ಹೇಗೆ ಮೇಲಕ್ಕೆತ್ತಿದಿರೋ ಹಾಗೆ ನಮ್ಮ ಪುತ್ರನನ್ನು ಹರಸಿ ಬೆಳೆಸಿ ಎಂದು ಮನವಿ ಮಾಡಿದರು.
ನಿರ್ದೇಶಕ ರಾಮು ಮಾತನಾಡಿ ಆರಂಭದಲ್ಲಿ ನಾನು ಪಿ.ಎನ್.ಸತ್ಯ ಪ್ರೇಂ ಜೊತೆ ಕೆಲಸ ಮಾಡಿದ್ದೆ, ಮೆಜೆಸ್ಟಿಕ್ ಸ್ಕ್ರಿಪ್ಟ್ ಬರೆದಿದ್ದು ನಾನೇ, ನಂತರ ಸತ್ಯ ಅವರಜೊತೆ ಮನಸ್ತಾಪವಾಗಿ ನನ್ನನ್ನು ಬಿಟ್ಟು ಚಿತ್ರ ಮಾಡಿದರು. ನಾನು ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್‌ನಲ್ಲಿ ನಡೀತಿರುವ ಘಟನೆಗಳನ್ನು ನೋಡಿದಾಗಲೇ ಈ ಟೈಟಲ್ ಹೊಳೆದಿತ್ತು, ಮೆಜೆಸ್ಟಿಕ್ ಸಿನಿಮಾ ನನ್ನ ಕನಸು, ಅದೀಗ ನನಸಾಗುತ್ತಿದೆ ಎಂದರು.
ನಾಯಕ ಭರತ್ ಮಾತನಾಡಿ ನಿರ್ದೇಶಕರು
ಈ ಕಥೆ, ಟೈಟಲ್ ಹೇಳಿದಾಗ ತುಂಬಾ ಖುಷಿಯಾಯ್ತು. ನಾನು ದರ್ಶನ್ ಅವರ ಅಭಿಮಾನಿ. ಅವರು ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಂದರ್ಭದಲ್ಲಿ ನಮ್ಮ ಸಿನಿಮಾ ಲಾಂಚ್ ಆಗ್ತಿದೆ. ಅವರ 1% ಆದರೂ ನಮಗೆ ಬಂದರೆ ಸಾಕು. ಮರಿದಾಸನ ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ ಎಂದರು,
ನಂತರ ನಾಯಕಿ ಸಂಹಿತಾ ವಿನ್ಯಾ, ಸಂಗೀತ ನಿರ್ದೇಶಕ ವಿನು ಮನಸು, ಛಾಯಾಗ್ರಾಹಕ ವೀನಸ್ ಮೂರ್ತಿ, ಸ್ಟಂಟ್ ಮಾಸ್ಟರ್ ಚಿನ್ನಯ್ಯ ಚಿತ್ರದ ಕುರಿತಂತೆ ಮಾತನಾಡಿದರು.